ಸಾರ್ವಜನಿಕರ ಸಹಕಾರದಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಸಾಧ್ಯ : ನ್ಯಾ.ಮಂಜುನಾಥ ನಾಯ್ಕ…!!!

Listen to this article

ಸಾರ್ವಜನಿಕರ ಸಹಕಾರದಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಸಾಧ್ಯ : ನ್ಯಾ.ಮಂಜುನಾಥ ನಾಯ್ಕ
ಶಿವಮೊಗ್ಗ:ಭ್ರಷ್ಟಾಚಾರ ತಡೆಗೆ ಸಾಕಷ್ಟು ಕಾನೂನುಗಳು, ಲೋಕಾಯುಕ್ತ, ವಿಶೇಷ ನ್ಯಾಯಾಲಯಗಳಿದ್ದರೂ ಇದನ್ನು ತಡೆಯಲು ಸಫಲವಾಗಿಲ್ಲ. ಸಾರ್ವಜನಿಕರ ಸಹಕಾರದಿಂದ ಮಾತ್ರ ಭ್ರಷ್ಟಾಚಾರವನ್ನು ಕಡಿಮೆ ಮಾಡಬಹುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಮಂಜುನಾಥ ನಾಯ್ಕ ಅಭಿಪ್ರಾಯಪಟ್ಟರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ಲೋಕಾಯುಕ್ತ, ರಾಷ್ಟಿಯ ಶಿಕ್ಷಣ ಸಮಿತಿ, ಜೆಎನ್‌ಎನ್ ಇಂಜಿನಿಯರಿoಗ್ ಕಾಲೇಜು, ಶಿವಮೊಗ್ಗ ಇವರ ಸಹಯೋಗದೊಂದಿಗೆ ಬುಧವಾರ ಜೆಎನ್‌ಎನ್ ಇಂಜಿನಿಯರಿoಗ್ ಕಾಲೇಜಿನ ಎಂಸಿಎ ಸಭಾಂಗಣದಲ್ಲಿ ಏರ್ಪಡಿಸಿದ್ದ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭ್ರಷ್ಟಾಚಾರ ತಡೆಗೆ ಸಾಕಷ್ಟು ಕಾನೂನುಗಳಿದ್ದರೂ ಇದರ ತಡೆ ಸಾಧ್ಯವಾಗಿಲ್ಲ. ಕಾರಣ ಜನ ಸಾಮಾನ್ಯರ ಸಹಕಾರದ ಕೊರತೆ. ಆದ್ದರಿಂದ ಸಾರ್ವಜನಿಕರು, ಯುವಜನತೆ ಎಚ್ಚೆತ್ತುಕೊಂಡು ಸಹಕರಿಸಿದಲ್ಲಿ ಮಾತ್ರ ಇದನ್ನು ಕಡಿಮೆ ಮಾಡಬಹುದು ಎಂದರು.
ಭ್ರಷ್ಟಾಚಾರ ತಡೆ ಕುರಿತು ಅರಿವು ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶ. ಈ ಉದ್ದೇಶವೇ ವಿಷಾಧನೀಯ. ಭ್ರಷ್ಟಾಚಾರ ಎಂಬುದು ಸಮಾಜದ ಒಳಹೊಕ್ಕಿದ್ದು ಇದರಿಂದ ಅನೇಕರು ತೊಂದರೆಗೀಡಾಗಿದ್ದರೆ, ಕೆಲವರು ಲಾಭ ಪಡೆಯುತ್ತಿದ್ದಾರೆ.
ಜನಸಂಖ್ಯೆಗೆ ಅನುಗುಣವಾಗಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಆದ್ದರಿಂದ ಸ್ಪರ್ಧೆ ಹೆಚ್ಚುತ್ತಿದೆ. ಈ ಅಸಮತೋಲನವೂ ಭ್ರಷ್ಟಾಚಾರಕ್ಕೆ ಕಾರಣವಾಗಿದೆ. ಹಾಗೂ ಅನಕ್ಷರತೆ ಅಥವಾ ಕಡಿಮೆ ಸಾಕ್ಷರತೆ ಪ್ರಮಾಣ ಕೂಡ ಭ್ರಷ್ಟಾಚಾರಕ್ಕೆ ಒಂದು ಕಾರಣವಾಗಿದೆ.
ಹೆಚ್ಚು ಬೇಕು ಎನ್ನುವ ದಾಹ ಭ್ರಷ್ಟಾಚಾರದ ಮೂಲ ಕಾರಣವಾಗಿದ್ದು, ಜೀವನದಲ್ಲಿ ನಮ್ಮ ಆದ್ಯತೆಗಳು ಬದಲಾಗಬೇಕು. ಉತ್ತಮ ಶಿಕ್ಷಣ ಮೊದಲ ಆದ್ಯತೆಯಾಗಬೇಕು. ಉತ್ತಮ ಶಿಕ್ಷಣ ಭ್ರಷ್ಟಾಚಾರ ನಿರ್ಮೂಲನೆಗೆ ಸಹಕಾರಿಯಾಗಿದೆ. ಹಾಗೂ ಜನರಿಗೆ ಸಾಕಷ್ಟು ಉದ್ಯೋಗ ಅವಕಾಶಗಳು ಮತ್ತು ಸೌಲಭ್ಯಗಳನ್ನು ನೀಡಿದಲ್ಲಿ ಒಂದು ಹಂತಕ್ಕೆ ಇದಕ್ಕೆ ಕಡಿವಾಣ ಹಾಕಬಹುದು ಎಂದ ಅವರು ಸ್ವಚ್ಚತೆ ಕೆಲಸ ನಿರ್ವಹಿಸುವ ಸಿಬ್ಬಂದಿಗಳಿಗೆ ಸಹ ವಿದ್ಯಾರ್ಹತೆಯನ್ನು ನಿಗದಿಪಡಿಸುತ್ತೇವೆ. ಹೀಗಿರುವಾಗ ನಮ್ಮ ಕಾನೂನುಗಳನ್ನು ರೂಪಿಸುವ ಜನಪ್ರತಿನಿಧಿಗಳಿಗೆ ಕನಿಷ್ಠ ವಿದ್ಯಾರ್ಹತೆ ನಿಗದಿಪಡಿಸದೇ ಇರುವುದು ದುರಂತ ಎನ್ನಬಹುದು ಎಂದರು.
ಕರ್ನಾಟಕ ಲೋಕಾಯುಕ್ತ ಪೊಲೀಸ್ ವರಿಷ್ಟಾಧಿಕಾರಿ ಮಂಜುನಾಥ ಚೌದರಿ ಹೆಚ್.ಎಂ. ಮಾತನಾಡಿ, ಸರ್ಕಾರಿ ಯೋಜನೆಗಳನ್ನು ಫಲಾನುಭವಿಗಳಿಗೆ ದೊರಕಿಸುವಲ್ಲಿ ಸರ್ಕಾರಿ ಅಧಿಕಾರಿಗಳ ಬೇಜವಾಬ್ದಾರಿತನ, ಸರ್ಕಾರಿ ಕರ್ತವ್ಯ ನಿರ್ವಹಿಸಲು ನಿರ್ಲಕ್ಷ, ಅನಗತ್ಯ ವಿಳಂತ ಮತ್ತು ಅಧಿಕೃತ ಕೆಲಸ ನಿರ್ವಹಿಸಲು ಲಂಚಕ್ಕೆ ಬೇಡಿಕೆ ಇಟ್ಟರೆ ಅದು ಭ್ರಷ್ಟಾಚಾರ. ಯುವಜನತೆ ಸೇರಿದಂತೆ ಯಾರೇ ಆಗಲಿ ಭ್ರಷ್ಟಾಚಾರವನ್ನು ಪ್ರೋತ್ಸಾಹಿಸಬಾರದು. ವಿದ್ಯಾರ್ಥಿಗಳು, ಯುವಜನತೆಗೆ ಇಂತಹ ಭ್ರಷ್ಟಾಚಾರ ಪ್ರಕರಣಗಳು ಗಮನಕ್ಕೆ ಬಂದರೆ ನೇರವಾಗಿ ಅರ್ಜಿ ಮೂಲಕ ಅಥವಾ ಕರೆ ಮಾಡಿ ಲೋಕಾಯುಕ್ತ ಕಚೇರಿಗೆ ತಿಳಿಸಬಹುದು.
ಯುವಜನತೆಯಲ್ಲಿ ಭ್ರಷ್ಟಾಚಾರ ಕುರಿತು ಜಾಗೃತಿ ಮತ್ತು ಅರಿವು ಮೂಡಿಸುವುದು ಅತಿ ಮುಖ್ಯವಾಗಿದೆ. ಯುವಜನತೆ ಉತ್ತಮ ಶಿಕ್ಷಣ ಪಡೆದು ಹತ್ತಾರು ಜನರಿಗೆ ಉದ್ಯೋಗ ನೀಡುವಂತಹ ಕೆಲಸ ಮಾಡಬೇಕು ಹಾಗೂ ವಾಹನ ಚಾಲನೆ ವೇಳೆ ರಸ್ತೆ ಸುರಕ್ಷತಾ ಕ್ರಮಗಳನ್ನೆಲ್ಲ ಪಾಲಿಸಬೇಕೆಂದು ಕಿವಿ ಮಾತು ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್. ನಾಗರಾಜ ಮಾತನಾಡಿ, ವೈಯಕ್ತಿಕ ಲಾಭಕ್ಕಾಗಿ ಸಾರ್ವಜನಿಕರಿಂದ ಹಣ ಪಡೆಯುವುದು ಭ್ರಷ್ಟಾಚಾರ. ಪ್ರಸ್ತುತ ಭ್ರಷ್ಟಾಚಾರ ಒಂದು ರೂಢಿಯಂತೆ ಆಗಿದೆ. ಇದು ದುರಾಸೆಯ ಫಲವಾಗಿದ್ದು ಎಲ್ಲ ಕಡೆ ವ್ಯಾಪಿಸಿದೆ. ಇದರ ನಿರ್ಮೂಲನೆ ಒಂದು ದೊಡ್ಡ ಸವಾಲಾಗಿದೆ. ಒಂದೊoದು ಸ್ಥಳದಲ್ಲಿ ಒಂದೊoದು ರೀತಿಯಲ್ಲಿ ಭ್ರಷ್ಟಾಚಾರವಿದ್ದು, ಇದಕ್ಕೆ ಸ್ಥಳೀಯವಾದ ಪರಿಹಾರವನ್ನು ಕಂಡುಕೊಳ್ಳಬೇಕಿದೆ. ವಿದ್ಯಾರ್ಥಿಗಳಾದ ನೀವು ಡೇಟಾ ಸೈನ್ಸ್, ತಾಂತ್ರಿಕ ಶಿಕ್ಷಣ ಅಳವಡಿಸಿಕೊಂಡು ಈ ಸವಾಲನ್ನು ಎದುರಿಸಬಹುದು.
ಸರಿಯಾದ ಶಿಕ್ಷಣ, ಸಂತೃಪ್ತಿ ಮತ್ತು ಮಾನವೀಯತೆಯ ನೆಲೆಗಟ್ಟಿನಿಂದ ಈ ಭ್ರಷ್ಟತೆಯಿಂದ ದೂರ ಇರಬಹುದು ಎಂದ ಅವರು ಯುವಜನತೆ ಭ್ರಷ್ಟಾಚಾರದಿಂದ ತಾವೂ ದೂರ ಇದ್ದು ಇದರ ವಿರುದ್ದ ಹೋರಾಡಬೇಕಿದೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ್ .ಎಂ.ಎಸ್. ಮಾತನಾಡಿದರು.
ಕರ್ನಾಟಕ ಪೊಲೀಸ್ ಇನ್ಸ್ಪೆಕ್ಟರ್ ಹೆಚ್.ಎಸ್.ಸುರೇಶ್ ಭ್ರಷ್ಟಾಚಾರ ತಡೆ ಕಾಯ್ದೆ 1988 ಕುರಿತು ಮಾತನಾಡಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಿ.ರಾಘವೇಂದ್ರ ಸ್ವಾಮಿ, ರಾಷ್ಟಿಯ ಶಿಕ್ಷಣ ಸಮಿತಿ ನಿರ್ದೇಶಕ ಅನಂತ ದತ್ತ, ಜೆಎನ್‌ಎನ್ ಇಂಜಿನಿಯರಿoಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್, ಇತರೆ ಅಧಿಕಾರಿ, ಸಿಬ್ಬಂದಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend