ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯಲ್ಲಿ ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ವಿದ್ಯಾರ್ಥಿ ಸಮೂಹವು ಬಾಹ್ಯಾಕಾಶ ಕ್ಷೇತ್ರದ ಆಸಕ್ತಿ ಬೆಳೆಸಿಕೊಳ್ಳಬೇಕು…!!!

Listen to this article

ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯಲ್ಲಿ ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ
ವಿದ್ಯಾರ್ಥಿ ಸಮೂಹವು ಬಾಹ್ಯಾಕಾಶ ಕ್ಷೇತ್ರದ ಆಸಕ್ತಿ ಬೆಳೆಸಿಕೊಳ್ಳಬೇಕು

ಬಳ್ಳಾರಿ:ವಿದ್ಯಾರ್ಥಿ ಸಮೂಹವು ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಳ್ಳುವುದರ ಮೂಲಕ ದೇಶದ ತಾಂತ್ರಿಕ ಸಾಮರ್ಥ್ಯಕ್ಕೆ ಕೊಡುಗೆ ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ಹೇಳಿದರು.


ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ಜಿಲ್ಲಾ ಪಂಚಾಯತ್ ಇವರ ಸಹಯೋಗದೊಂದಿಗೆ ನಗರದ ಕೋಟೆ ಪ್ರದೇಶದ ಜಿಪಂ ನಜೀರ್ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಬ್ಯಾಹಾಕಾಶ ಅಧ್ಯಯನ ಕುರಿತಂತೆ ಯಾವುದೇ ಒಂದು ಯೋಜನೆಯ ಯಶಸ್ಸಿನ ಹಿಂದೆ ಹಲವಾರು ವಿಜ್ಞಾನಿಗಳ ಪೂರ್ವ ತಯಾರಿ, ಅವರ ಕಠಿಣ ಪರಿಶ್ರಮ ಅಡಗಿದೆ. ಅವರ ಬದುಕು ವಿಶಿಷ್ಟವಾದುದು ಎಂದು ಬಣ್ಣಿಸಿದರು.
ಇಂದಿನ ಯುವಪೀಳಿಗೆಯು ಸಾಧನೆಯ ಗುರಿ ಇಟ್ಟುಕೊಂಡು ಯಶಸ್ಸಿನ ಪಥದಲ್ಲಿ ಸಾಗಬೇಕು ಎಂದು ವಿದ್ಯಾರ್ಥಿ ಸಮೂಹಕ್ಕೆ ಕಿವಿಮಾತು ಹೇಳಿದರು.
ಇಸ್ರೋ ವಿಜ್ಞಾನಿ ವಿ.ಚಂದ್ರಬಾಬು ಅವರು ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ, ರಾಷ್ಟ್ರೀಯ ಬಾಹ್ಯಾಕಾಶ ದಿನವು ಸಾಧನೆಗಳ ಸ್ಮರಣೆ ಮತ್ತು ಭವಿಷ್ಯದ ಅನ್ವೇಷಣೆಗಳ ಮಹತ್ವವನ್ನು ಸಾರಲು ಮುಖ್ಯವಾಗಿದೆ ಎಂದು ಅವರು ಹೇಳಿದರು.
ಚಂದ್ರಯಾನ-3ರ ಅವಿಸ್ಮರಣೀಯ ಸಾಧನೆಯ ಮೂಲಕ ಭಾರತ ಚಂದ್ರನ ಅಂಗಳದಲ್ಲಿ ಇಳಿದ ನಾಲ್ಕನೇ ರಾಷ್ಟ್ರ  ಎಂಬ  ಗೌರವ ಸಂಪಾದಿಸಿದೆ. ಇದರ ಜೊತೆಗೆ, ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು.

ಆ ಮೂಲಕ ಬಾಹ್ಯಾಕಾಶ ಅನ್ವೇಷಣೆಯಲ್ಲಿ ಭಾರತ ತನ್ನದೇ ಆದ ಛಾಪು ಮೂಡಿಸಿತು. ವಿಕ್ರಮ್ ಲ್ಯಾಂಡರ್‌ನ ಯಶಸ್ವಿ ಸಾಫ್ಟ್ ಲ್ಯಾಂಡಿಗ್ ಬಳಿಕ, ಪ್ರಗ್ಯಾನ್ ರೋವರ್ ಯಶಸ್ವಿಯಾಗಿ ಕಾರ್ಯಾಚರಿಸಿ, ಚಂದ್ರಯಾನ-3 ಯೋಜನೆಯ ಯಶಸ್ಸಿಗೆ ಇನ್ನೊಂದು ಗರಿ ಮೂಡಿಸಿತು ಎಂದರು.
2023ರ ಆ.23ರಂದು ಭಾರತದ ಪ್ರಮುಖ ಬಾಹ್ಯಾಕಾಶ ಯೋಜನೆಯಾದ ‘ಚಂದ್ರಯಾನ-3′ ಚಂದ್ರನ ದಕ್ಷಿಣ ಧ್ರುವ ತಲುಪುವ ಮೂಲಕ, ಈ ಸಾಧನೆ ಮಾಡಿದ ಮೊದಲ ದೇಶವೆಂಬ ಖ್ಯಾತಿಗೆ ಭಾರತ ಪಾತ್ರವಾಗಿತ್ತು. ಚಂದ್ರಯಾನದ ಯಶಸ್ಸಿನ ನೆನಪಿಗಾಗಿ ಆ.23ರನ್ನು ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ವನ್ನಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಭಾರತದ ಬಾಹ್ಯಾಕಾಶ ಅನ್ವೇಷಣೆಗಳು ಕೇವಲ ಅಸಾಧಾರಣ ವೈಜ್ಞಾನಿಕ ಸಾಧನೆಗಳಿಗೆ ಸೀಮಿತವಾಗಿರದೆ, ಭಾರತೀಯರ ದೈನಂದಿನ ಜೀವನದ ಮೇಲೂ ಧನಾತ್ಮಕ ಬದಲಾವಣೆ ಬೀರುತ್ತದೆ. ತಾಂತ್ರಿಕ ಅಭಿವೃದ್ಧಿಗಳು ಮತ್ತು ಬಾಹ್ಯಾಕಾಶ ಅನ್ವೇಷಣೆಗಳಲ್ಲಿನ ಯಶಸ್ಸು ಸಾಧಿಸಲು ಹಲವಾರು ಸಂಶೋಧನೆ ಕೈಗೊಳ್ಳಲು ಯತ್ನ ನಡೆಸುತ್ತಿದೆ ಎಂದು ಅವರು ವಿಶ್ಲೇಷಿಸಿದರು.


ಸಾರ್ವಜನಿಕರಲ್ಲಿ ಬಾಹ್ಯಾಕಾಶ ಅನ್ವೇಷಣೆಗಳಿಂದ ಲಭಿಸುವ ಹತ್ತು ಹಲವು ಪ್ರಯೋಜನಗಳ ಕುರಿತು ಅರಿವು ಮೂಡಿಸುವುದೂ ಇದರ ಗುರಿಯಾಗಿದ್ದು, ಬಾಹ್ಯಾಕಾಶ ದಿನಾಚರಣೆ ಜನರಲ್ಲಿ  ರಾಷ್ಟ್ರಿಯ ಹೆಮ್ಮೆ ಮತ್ತು ಐಕ್ಯತೆ ಮೂಡಿಸಲಿದೆ ಎಂದು ತಮ್ಮ ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಉಪಗ್ರಹ ಮತ್ತು ರಾಕೆಟ್‌ಗಳ ತಯಾರಿಕೆ, ಅವುಗಳ ಕಾರ್ಯಕ್ಷಮತೆ, ವಿವಿಧ ಹಂತಗಳಲ್ಲಿ ಬೆಳೆದು ಬಂದ ಹಾದಿಯ ಬಗ್ಗೆ ಸವಿಸ್ತಾರವಾಗಿ ತಿಳಿಸಿಕೊಟ್ಟರು ಮತ್ತು ಉಪಗ್ರಹ, ರಾಕೆಟ್‌ಗಳ ಉಡಾವಣೆಯ ಬಗೆಯನ್ನು ಎಳೆ-ಎಳೆಯಾಗಿ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ತೋರಿಸಿಕೊಟ್ಟರು.
ಈ ವೇಳೆ ಜಿಪಂ ಉಪ ಕಾರ್ಯದರ್ಶಿ ಗಿರಿಜಾ ಶಂಕರ್, ಜಿಪಂ ಮುಖ್ಯ ಯೋಜನಾಧಿಕಾರಿ ವಾಗೀಶ್ ಶಿವಾಚಾರ್ಯ ಎಸ್.ಎಂ., ಯೋಜನಾ ನಿರ್ದೇಶಕ ವಿನೋದ ಕುಮಾರ್, ಎನ್‌ಐಸಿ ಕೇಂದ್ರದ ತಾಂತ್ರಿಕ ನಿರ್ದೇಶಕ ಶಿವಪ್ರಸಾದ್ ವಸ್ತದ್, ಕಾರ್ಯಕ್ರಮ ಸಂಯೋಜಕ ರಾಮಚಂದ್ರ ರೆಡ್ಡಿ ಜಿ.ಬಿ ಸೇರಿದಂತೆ ವಿವಿಧ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend