ಕೊಪ್ಪಳ ಜಿಲ್ಲೆಗೆ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ಮತ್ತು ತಂಡ ಭೇಟಿ…!!!

Listen to this article

ಕೊಪ್ಪಳ ಜಿಲ್ಲೆಗೆ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ಮತ್ತು ತಂಡ ಭೇಟಿ

ಗೌಳಿ, ನೊಳಂಬ, ವೀರಶೈವ ಲಿಂಗಾಯತ ಪಂಚಮಸಾಲಿ, ಆದಿಬಣಜಿಗ, ಕುಡುವಕ್ಕಲಿಗ, ಇತರೆ ಓಬಿಸಿ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಯ ಅಧ್ಯಯನ

ಕೊಪ್ಪಳ ಜಿಲ್ಲೆಯಲ್ಲಿ ವಾಸಿಸುತ್ತಿರುವ ಗೌಳಿ, ನೊಳಂಬ, ವೀರಶೈವ ಲಿಂಗಾಯತ ಪಂಚಮಸಾಲಿ, ಆದಿಬಣಜಿಗ, ಕುಡುವಕ್ಕಲಿಗ ಹಾಗೂ ಇತರೆ ಓಬಿಸಿ ಸಮುದಾಯದವರ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಕುರಿತು ಸ್ಥಳ ಪರಿಶೀಲನೆ ಮತ್ತು ಅಧ್ಯಯನ ಮಾಡಲು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ.ಜಯಪ್ರಕಾಶ ಹೆಗ್ಡೆ ಹಾಗೂ ಸದಸ್ಯರನ್ನೊಳಗೊಂಡ ತಂಡವು ನವೆಂಬರ್ 17ರಂದು ಕೊಪ್ಪಳ ಜಿಲ್ಲೆಗೆ ಭೇಟಿ ನೀಡಿತು.


ಆಯೋಗದ ಸದಸ್ಯರಾದ ಬಿ.ಎಸ್.ರಾಜಶೇಖರ, ಶಾರದಾ ನಾಯಕ, ಕಲ್ಯಾಣಕುಮಾರ ಎಚ್ ಎಸ್., ಕೆ.ಟಿ.ಸುವರ್ಣ, ಅರುಣಕುಮಾರ ಅವರನ್ನೊಳಗೊಂಡ ತಂಡವು ನಿಗದಿತ ವೇಳಾಪಟ್ಟಿಯಂತೆ ಬೆಳಗ್ಗೆ ಮೊದಲಿಗೆ ಕೊಪ್ಪಳ ತಾಲ್ಲೂಕಿನ ಹಿರೇಸಿಂಧೋಗಿ ವ್ಯಾಪ್ತಿಯಲ್ಲಿ, ಮಧ್ಯಾಹ್ನ ವೇಳೆ ಹಲಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರವಾಸ ಕೈಗೊಂಡು ಆಯಾ ಗ್ರಾಮಸ್ಥರಿಂದ ಅರ್ಜಿಗಳನ್ನು ಸ್ವೀಕರಿಸಿದರು. ಅರ್ಜಿದಾರರ ಅಭಿಪ್ರಾಯ ಮತ್ತು ಬೇಡಿಕೆಗಳನ್ನು ಸಹ ದಾಖಲುಪಡಿಸಿಕೊಂಡರು.
ಮೊದಲಿಗೆ ಹಿರೇಸಿಂದೋಗಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಸಮುದಾಯದ ಮುಖಂಡರು ಮನವಿ ಸಲ್ಲಿಸಿದರು. ಆದಿಬಣಜಿಗ ಮತ್ತು ಲಿಂಗಾಯತ-ಬಣಜಿಗ ಬೇರೆ ಬೇರೆ, ಲಿಂಗಾಯತ-ಬಣಜಿಗ ಸಮುದಾಯವನ್ನು ಪ್ರವರ್ಗ 2ಎಗೆ ಸೇರಿಸಬೇಕು ಎಂದು ಮನವಿ ಸಲ್ಲಿಸಿದರು. ಎಸ್ಟಿಗೆ ಸೇರಿಸುವಂತೆ ಗಂಗಾಮತ, ಬೇಸ್ತಾ, ಕುರುಬ ಸಮುದಾಯದವರು ಮನವಿ ಸಲ್ಲಿಸಿದರು. ವೀರಶೈವ ಲಿಂಗಾಯತ ಸಮುದಾಯದವರು ತಮ್ಮ ಮೀಸಲಾತಿ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಬೇಕು ಎಂದು ಮನವಿ ಮಾಡಿದರು.
ಮೀಸಲಾತಿಯಲ್ಲಿ ಲಿಂಗಾಯತ-ಗಾಣಿಗ ಎಂದು ಇದ್ದು, ಅದನ್ನು ಹಿಂದೂ-ಗಾಣಿಗ ಎಂಬುದಾಗಿ ಮಾಡಲು ಆ ಸಮುದಾಯದ ಜನರು ಮನವಿ ಮಾಡಿದರು.
ಬಳಿಕ ಹಲಗೇರಿ ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಬಗನಾಳ ಗ್ರಾಮದ ಅಕ್ಕಮ್ಮ ಉಪ್ಪಾರ ಅವರು ಉಪ್ಪಾರ ಸಮುದಾಯವನ್ನು, ಗುಡದಪ್ಪ ಬನಪ್ಪನವರ ಅವರು ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಲು ಮನವಿ ಸಲ್ಲಿಸಿದರು. ಗಂಗಾಮತ ಸಮಾಜವನ್ನು ಮತ್ತು ಹಡಪದ ಸಮಾಜವನ್ನು ಸಹ ಎಸ್ ಟಿಗೆ ಸೇರಿಸಲು ಆ ಸಮುದಾಯದವರು ಮನವಿ ಸಲ್ಲಿಸಿದರು.
ಗಾಣಿಗ ಸಮುದಾಯಕ್ಕೆ ಸಮುದಾಯ ಭವನ ನಿರ್ಮಿಸಲು, ಗ್ರಾಮದ ಶಾಲೆಗೆ ಮೂಲಭೂತ ಸೌಕರ್ಯ ಕಲ್ಪಿಸಲು ಗ್ರಾಮಸ್ಥರು ಮನವಿ ಸಲ್ಲಿಸಿದರು. ಗ್ರಾಮದ ಅಂಧ ಮತ್ತು ಬುದ್ಧಿಮಾಂದ್ಯ ಮಕ್ಕಳಿಗೆ ಸಹ ಪ್ರತ್ಯೇಕ ಶಾಲೆಯೊಂದನ್ನು ತೆರೆಯಲು ಗ್ರಾಮದ ಶಿವಲಿಂಗಮ್ಮ ಕಲ್ಲೂರ ಅವರು ಮನವಿ ಮಾಡಿದರು.
ಈ ವೇಳೆ ವಿವಿಧ ಸಮುದಾಯದ ಮುಖಂಡರು ಮಾತನಾಡಿ, ನಮ್ಮ ಸಮುದಾಯದಲ್ಲಿ ಕೆಲವರ ಆರ್ಥಿಕ ಸ್ಥಿತಿ ಮಾತ್ರ ಉತ್ತಮವಾಗಿದೆ. ಇನ್ನು ಬಹುತೇಕರು ಕಡುಬಡವರಿದ್ದೇವೆ. ರೈತಾಪಿ ಜನರಿದ್ದೇವೆ. ನಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯಲು ಆಗಿಲ್ಲ. ನೌಕರಿ ಸಿಗುತ್ತಿಲ್ಲ ಎಂದು ವಿವಿಧ ಸಮುದಾಯದವರು ತಿಳಿಸಿದರು.
ಈ ವೇಳೆ ಆಯೋಗದ ಅಧ್ಯಕ್ಷರು ಮಾತನಾಡಿ,
ಪರಿಶಿಷ್ಟ ವರ್ಗ ಎಸ್ ಟಿ ಗೆ ಸೇರಿಸಬೇಕು ಎನ್ನುವ ಕೆಲವು ಸಮುದಾಯಗಳ ಬೇಡಿಕೆಯನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಆಯೋಗಕ್ಕೆ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿದರು. ಎಎಸ್ಸಿ ಮತ್ತು ಎಸ್ಟಿಗೆ ಸೇರಿಸುವ ವಿಷಯವು ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ತಮಗೆ ಮನವಿ ಸಲ್ಲಿಸಿದ ವೀರಶೈವ ಲಿಂಗಾಯತ ಪಂಚಮಸಾಲಿ, ಆದಿಬಣಜಿಗ, ಕುಡುವಕ್ಕಲಿಗ ಇತರೆ ಓಬಿಸಿ ಸಮುದಾಯದವರ ಅರ್ಜಿಗಳನ್ನು ಪರಿಶೀಲಿಸಿ, ಆಯಾ ಸಮುದಾಯದ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಯ ಬಗ್ಗೆ ಕೂಡ ಅಧ್ಯಯನ ನಡೆಸಿ ಈ ಬಗ್ಗೆ ಸರ್ಕಾರಕ್ಕೆ ಸರಿಯಾದ ರೀತಿಯಲ್ಲಿ ವರದಿ ಮಾಡುತ್ತೇವೆ ಎಂದು ತಿಳಿಸಿದರು.
ಗ್ರಾಮದಲ್ಲಿ ಸಂಚಾರ: ಹಲಗೇರಿಯಲ್ಲಿ ನಡೆದ ಸಭೆಯ ಬಳಿಕ ಅಧ್ಯಕ್ಷರು ಮತ್ತು ಸದಸ್ಯರು, ಹಲಗೇರಿ ಗ್ರಾಮ ಸಂಚಾರ ನಡೆಸಿದರು. ಗ್ರಾಮದ ಬಸಪ್ಪ ಹಳ್ಳಿ, ದ್ಯಾಮವ್ವ ಮಕಾಳಿ, ಶೋಭಾ ಅಂಗಡಿ, ಬಸನಗೌಡ ಪಾಟೀಲ, ವೀರನಗೌಡ ಪಾಟೀಲ, ಗೋವಿಂದಪ್ಪ ಪಾಟಗೆ ಅವರ ಮನೆಗಳಿಗೆ ಭೇಟಿ ನೀಡಿ, ಅವರ ಉದ್ಯೋಗ, ಮಕ್ಕಳ ವಿದ್ಯಾಭ್ಯಾಸ ವಿವರ, ಅವರ ಮನೆತನದ ಬಗ್ಗೆ ವಿಚಾರಿಸಿ ಅವರ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿಯ ಬಗ್ಗೆ ಖುದ್ದು ಮಾಹಿತಿ ಪಡೆದರು.
ಈ ವೇಳೆ ಕುಕನೂರ ತಹಸೀಲ್ದಾರ ಗುರುಸ್ವಾಮಿ, ಬಿಸಿಎಂ ಇಲಾಖೆಯ ಉಪ ನಿರ್ದೇಶಕರಾದ ಜಿ.ಎನ್.ದೊಡ್ಡಮನಿ, ಜಿಲ್ಲಾ ವ್ಯವಸ್ಥಾಪಕರಾದ ಬಿ.ವಿ ಮಠ, ಬಿಸಿಎಂ ಇಲಾಖೆಯ ತಾಲೂಕಾಧಿಕಾರಿ ನಾಗರತ್ನ, ವಿಸ್ತರಣಾಧಿಕಾರಿ ಡಾ.ಶಿವಶಂಕರ ಕರಡಕಲ್, ಹಲಗೇರಿ ಗ್ರಾಪಂ ಅಧ್ಯಕ್ಷರಾದ ಶರಣಮ್ಮ ತಳವಾರ, ಉಪಾಧ್ಯಕ್ಷರಾದ ಸಿದ್ದಮ್ಮ ಕೋರಿ ಹಾಗೂ ಇನ್ನೀತರರು ಇದ್ದರು.
ಬಿಸಿಎಂ ವಸತಿ ನಿಲಯದಲ್ಲಿ ಭೋಜನ: ಹಲಗೇರಿ ಕಾರ್ಯಕ್ರಮದ ಬಳಿಕ ಅಧ್ಯಯನ ತಂಡವು ಯಲಬುರ್ಗಾ ತಾಲೂಕಿನ ತಳಕಲ್ಲ ಗ್ರಾಮದ ಬಿಸಿಎಂ ವಸತಿ ನಿಲಯಕ್ಕೆ ಭೇಟಿ ನೀಡಿತು. ಅಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ವಸತಿ ನಿಲಯದ ಮೇಲ್ವಿಚಾರಕರಾದ ಅಜಯಕುಮಾರ ಹೊಸಭಾವಿ ಹಾಗೂ ಇತರರು ಇದ್ದರು.
ಮಧ್ಯಾಹ್ನ ನಂತರ ಯಲಬುರ್ಗಾ ತಾಲೂಕಿಗೆ ಭೇಟಿ: ಊಟದ ನಂತರ ಅಧ್ಯಯನ ತಂಡವು ಯಲಬುರ್ಗಾ ತಾಲ್ಲೂಕಿನ ತಳಕಲ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ, ಸಂಜೆ ವೇಳೆಯಲ್ಲಿ ಇಟಗಿ ಗ್ರಾಮಕ್ಕೆ ಭೇಟಿ ನೀಡಿತು.

ವರದಿ. ಮಂಜುನಾಥ್ ದೊಡ್ಡಮನಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend