ಇಪ್ಪತ್ನಾಲ್ಕು ವರ್ಷದ ಈ ಹುಡುಗಿ ಈ ಬಾರಿ ಒಲಿಂಪಿಕ್ಸ್ ನಲ್ಲಿ ನೂರು ಮೀಟರ್ ಓಟದ ಸ್ಪರ್ಧೆಯಲ್ಲಿ ಗಳಿಸಿದ್ದು ಬೆಳ್ಳಿ ಪದಕ…!!!

Listen to this article

ಇಪ್ಪತ್ನಾಲ್ಕು ವರ್ಷದ ಈ ಹುಡುಗಿ ಈ ಬಾರಿ ಒಲಿಂಪಿಕ್ಸ್ ನಲ್ಲಿ ನೂರು ಮೀಟರ್ ಓಟದ ಸ್ಪರ್ಧೆಯಲ್ಲಿ ಗಳಿಸಿದ್ದು ಬೆಳ್ಳಿ ಪದಕ. ಸೇಂಟ್ ಲೂಸಿಯಾದ ಹುಡುಗಿ ಜೂಲಿಯನ್ ಆಲ್ಫ್ರೆಡ್ ಚಿನ್ನ ಗೆದ್ದಳು. ಆದರೆ ಹೆಚ್ಚು ಸದ್ದು ಮಾಡುತ್ತಿರುವುದು ಬೆಳ್ಳಿಗೆದ್ದ ಹುಡುಗಿ ಶಾ ಕೆರ್ರಿ ರಿಚರ್ಡ್ ಸನ್. ಶಾರ್ಟ್ ವಿಡಿಯೋಗಳಲ್ಲಿ, ರೀಲ್ಸ್ ಗಳಲ್ಲಿ ಇವಳದ್ದೇ ಕಾರುಬಾರು.

ರಿಚರ್ಡ್ಸ್ ಸನ್ ಸದ್ದು ಮಾಡುತ್ತಿರುವುದಕ್ಕೆ ಕಾರಣವಿದೆ. ಅವಳು ಎಲ್ಲರಲ್ಲಂತಲ್ಲದ ಹುಡುಗಿ. ಬೆಳೆದಿದ್ದು ಅಜ್ಜಿ, ಚಿಕ್ಕಮ್ಮನ ಆಸರೆಯಲ್ಲಿ. ಅಮ್ಮ ಇವಳನ್ನು ಬಿಟ್ಟು ಹೋದಳು. ಹೈಸ್ಕೂಲ್ ಹುಡುಗಿ ಆಘಾತ ತಡೆಯಲಾಗದೆ ಆತ್ಮಹತ್ಯೆಗೆ ಪ್ರಯತ್ನಿಸಿದಳು. ಅಜ್ಜಿ ಹೇಗೋ ಉಳಿಸಿಕೊಂಡಳು. ಬಾಲ್ಯದಲ್ಲೇ ಇವಳಿಗೆ ಮನೋವೈದ್ಯರ ಥೆರಪಿಗಳು!

ಇನ್ನೆಲ್ಲೋ ಬದುಕುತ್ತಿದ್ದ ತಾಯಿ ಸತ್ತು ಹೋದ ವಿಷಯವೇ ಅವಳಿಗೆ ಗೊತ್ತಿರಲಿಲ್ಲ. 2021ರಲ್ಲಿ ಒಲಿಂಪಿಕ್ಸ್ ಅರ್ಹತಾ ಸುತ್ತು ಆಡಲು ತಯಾರಿ ನಡೆಸಿದ್ದ ರಿಚರ್ಡ್ ಸನ್ ಗೆ ಪತ್ರಕರ್ತರೊಬ್ಬರು ಆಕೆಯ ತಾಯಿ ಮೃತಪಟ್ಟಿರುವ ಕುರಿತು ಪ್ರಶ್ನೆ ಕೇಳಿದಾಗಲೇ ಅವಳಿಗೆ ವಿಷಯ ಗೊತ್ತಾಗಿದ್ದು. ರಿಚರ್ಡ್‌ಸನ್ ಖಿನ್ನತೆಗೆ ಒಳಗಾದಳು. ಒಳಗೊಳಗೆ ಕುದಿಯುತ್ತಿದ್ದ ಸಂಕಟದಿಂದ ಹೊರಗೆ ಬರಲು ಗಾಂಜಾ ಸೇವಿಸಿದಳು. ಆಕೆಯ ಪರೀಕ್ಷೆ ಸಂದರ್ಭದಲ್ಲಿ ಗಾಂಜಾ ಸೇವಿಸಿದ್ದು ಪತ್ತೆಯಾಗಿ ಒಲಿಂಪಿಕ್ಸ್ ಆಡುವ ಅರ್ಹತೆಯನ್ನೇ ಕಳೆದುಕೊಂಡಳು.

ಕೆರ್ರಿ ರಿಚರ್ಡ್ ಸನ್ ಅಷ್ಟು ಗೊತ್ತಿಗಾಗಲೇ ಅಮೆರಿಕದಲ್ಲಿ ದೊಡ್ಡದಾಗಿ ಸದ್ದು ಮಾಡಿದ್ದಳು. 2019ರಲ್ಲಿ ಪಂದ್ಯಾವಳಿಯೊಂದರಲ್ಲಿ ಕೇವಲ 10.75 ಸೆಕೆಂಡ್ ಗಳಲ್ಲಿ 100 ಮೀಟರ್ ಓಡಿ ದಾಖಲೆ ಸೃಷ್ಟಿಸಿದ್ದಳು. ಜಗತ್ತಿನ ಯಾವುದೇ ಮಹಿಳೆಯರ ಪಂದ್ಯಾವಳಿಯ 100 ಮೀಟರ್ ಓಟದ ಇತಿಹಾಸದಲ್ಲಿ ಹತ್ತು ಅತಿವೇಗದ ಓಟಗಳಲ್ಲಿ ಈ ಓಟವೂ ಒಂದಾಗಿ ದಾಖಲಾಗಿತ್ತು. ಇಡೀ ದೇಶದ ಕಣ್ಣು ಅವಳ ಮೇಲಿತ್ತು.‌ ಈ ಬಾರಿ ಒಲಿಪಿಂಕ್ಸ್ ನಲ್ಲಿ ಚಿನ್ನ ಈಕೆಯದ್ದೇ ಪಾಲು ಎಂಬ ವಿಶ್ವಾಸ ಎಲ್ಲರಲ್ಲಿತ್ತು.

ಆದರೆ ಆಕೆ ಗಾಂಜಾ ಸೇವಿಸಿ ಬ್ಯಾನ್ ಆಗಿದ್ದಳು. ಹಾಗಂತ ಅವಳಿಗೆ ಇದ್ದ ಬೆಂಬಲವೇನು ಕಡಿಮೆಯಾಗಿರಲಿಲ್ಲ. ಗಾಂಜಾವನ್ನು ಮಾದಕವಸ್ತುಗಳ ಪಟ್ಟಿಯಲ್ಲಿ ಸೇರಿಸಿರೋದೇ ತಪ್ಪು ಎಂದು ಹಲವರು ವಾದಿಸಿದರು. ರಿಚರ್ಡ್ ಸನ್ ಗೆ ಆಗಿದ್ದು ಅನ್ಯಾಯ ಎಂದು ಪ್ರತಿಭಟಿಸಲಾಯಿತು. ಕೊನೆಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಸಹ ಈಕೆಯ ಪರವಾಗಿ ಮಾತನಾಡಿದರು.

ರಿಚರ್ಡ್ ಸನ್ ಈ ಕಹಿ ಘಟನೆಯ ನಂತರ ಚೇತರಿಸಿಕೊಂಡಳು. ಪರೀಕ್ಷೆ ಆದಾಗಲೇ ಆಕೆ ಗಾಂಜಾ ಸೇವಿಸಿದ್ದನ್ನು ಒಪ್ಪಿಕೊಂಡಿದ್ದಳು. ಒಂದು ತಿಂಗಳ ಬ್ಯಾನ್ ಅವಳನ್ನು ಒಲಿಂಪಿಕ್ಸ್ ಆಡದಂತೆ ತಡೆದಿತ್ತು. ನಂತರ ಆಕೆ ಮತ್ತೆ ಬಂದಳು. 2023ರ ಅಥ್ಲೆಟಿಕ್ ವರ್ಲ್ಡ್ ಚಾಂಪಿಯನ್ ಶಿಪ್ ನಲ್ಲಿ ನೂರು ಮೀಟರ್ ಓಟದಲ್ಲಿ ಚಿನ್ನ ಗೆದ್ದಳು. ಅದೇ ಪಂದ್ಯಾವಳಿಯಲ್ಲಿ ರಿಲೇಯಲ್ಲೂ ಚಿನ್ನ ಗೆದ್ದಳು. 200 ಮೀಟರ್ ಓಟದಲ್ಲಿ ಕಂಚು ಗೆದ್ದಳು.

ರಿಚರ್ಡ್ ಸನ್ ನಿರ್ಭಿಡೆಯಿಂದ ತನ್ನನ್ನು ತಾನು ಎಕ್ಸ್ ಪ್ರೆಸ್ ಮಾಡಿಕೊಳ್ಳುವ ಹುಡುಗಿ. ಇದ್ದಕ್ಕಿದ್ದಂತೆ ಅವಳು ನನಗೊಬ್ಬ ಗರ್ಲ್ ಫ್ರೆಂಡ್ ಇದ್ದಾಳೆ ಎಂದುಬಿಟ್ಟಳು. ಆಗ ಗೊತ್ತಾಗಿದ್ದು ಆಕೆ ಬೈಸೆಕ್ಷುಯಲ್ ಎಂಬ ವಿಷಯ. ಅದನ್ನು ಹೇಳಿಕೊಳ್ಳುವುದು ಆಕೆಗೆ ಹಿಂಜರಿಕೆಯ ವಿಷಯವೇ ಆಗಿರಲಿಲ್ಲ. LGBTQ ಸಮುದಾಯದ ಹಕ್ಕುಗಳ ಕುರಿತು ಆಕೆ ಧ್ವನಿ ಎತ್ತಿದಳು.

ರಿಚರ್ಡ್ ಸನ್ ಗೆ ತನ್ನನ್ನು ತಾನು ಸಿಂಗರಿಸಿಕೊಳ್ಳುವುದೆಂದರೆ ಮಹದಾನಂದ. ತನ್ನ ಉಗುರುಗಳನ್ನು ಉದ್ದುದ್ದ ಬೆಳೆಸುತ್ತಾಳೆ. ಅವುಗಳಿಗೆ ಬಣ್ಣಬಣ್ಣದ ಚಿತ್ತಾರ. ಆಕೆ ತನ್ನ ಉದ್ದನೆಯ ನೀಳ ಕೂದಲ ಮೇಲೆ ಪ್ರಯೋಗಗಳ ಮೇಲೆ ಪ್ರಯೋಗಗಳನ್ನು ಮಾಡುತ್ತಿರುತ್ತಾಳೆ. ಒಮ್ಮೆ ನೀಲಿಯಾಗುವ ಅವಳ ಹೆರಳು ಇನ್ನೊಮ್ಮೆ ಕೆಂಪಾಗುತ್ತದೆ, ಮತ್ತೆ ಕಡುಗಪ್ಪಾಗುತ್ತದೆ. ಕೂದಲಿಗೆ ನೂರು ಜಡೆ ಹೆಣೆದು ಅವಳು ಓಡಿಬರುತ್ತಿದ್ದರೆ ಅವಳ ಅಭಿಮಾನಿಗಳ ಎದೆಯಲ್ಲಿ ರಕ್ತ ಜೋರಾಗಿ ಓಡತೊಡಗುತ್ತದೆ.

Black Lives Matter ಆಂದೋಲನ ಶುರುವಾದಾಗ ರಿಚರ್ಡ್ ಸನ್ ಅದರ ಭಾಗವಾದಳು. ಕಪ್ಪುಜನರ ಹಕ್ಕುಗಳಿಗಾಗಿ ಧ್ವನಿ ಎತ್ತಿದಳು. ನಾನು ಕಪ್ಪಗೆ ಇರುವುದಕ್ಕೆ ಹೆಮ್ಮೆ ಪಡುತ್ತೇನೆ, ನಾನು ಕಪ್ಪು ಹುಡುಗಿಯಾಗಿದ್ದರಿಂದಲೇ ಇಷ್ಟು ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಹೇಳಿದಳು ಆಕೆ.

ರಿಚರ್ಡ್ ಸನ್ ಹಾಗೇ, ತನಗೆ ಅನ್ನಿಸಿದ್ದನ್ನು, ಬೇಕಾಗಿದ್ದನ್ನು ಯಾವ ಎಗ್ಗು‌ಸಿಗ್ಗಿಲ್ಲದೆ ಮಾಡುತ್ತಾಳೆ, ಮಾತಾಡುತ್ತಾಳೆ. ನಾನೂ ಕೂಡ ನಿಮ್ಮಂತೆಯೇ ಒಬ್ಬ ಹುಡುಗಿ, ನನಗೂ ಭಾವನೆಗಳಿವೆ. ನಿಮಗಿಂತ‌ ಕೊಂಚ ಜೋರಾಗಿ ಓಡಬಲ್ಲೆ.‌ ಅಷ್ಟೆ ವ್ಯತ್ಯಾಸ ಎನ್ನುವ ಆಕೆ ಪ್ರತಿನಿತ್ಯ ನಮ್ಮನ್ನು ನಾವು ಒಳಿತಿನೆಡೆಗೆ ದೂಡುತ್ತಿರಬೇಕು. ನಮ್ಮೆಲ್ಲ ಕ್ರಿಯೆಗಳು ಜಗತ್ತಿನ ಒಳಿತಿಗಾಗಿ ತುಡಿಯಬೇಕು ಎಂದು ಚಿಕ್ಕವಯಸ್ಸಲ್ಲೇ ದೊಡ್ಡ ಮಾತು ಆಡುತ್ತಾಳೆ.

ರಿಚರ್ಡ್ ಸನ್ ಓಡುವುದನ್ನು ನೀವಿನ್ನೂ ನೋಡಿಲ್ಲವಾದರೆ ಖಂಡಿತ ನೋಡಿ. ಆಕೆ ಕಣ್ಣಿಗೆ ಹಬ್ಬ. ಅವಳ ಕಾನ್ಫಿಡೆನ್ಸ್… ಗೆದ್ದ ಮೇಲೆ ಅವಳು ತೋರುವ ವಿಜಯದ ಎಕ್ಸ್ ಪ್ರೆಷನ್ ಗಳಂತೂ ಅಬ್ಬಾ ಅನ್ನಿಸುತ್ತದೆ…

ವರದಿ. ಮಂಜುನಾಥ್ ದೊಡ್ಡಮನಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend