ಗಾನಕೋಗಿಲೆ ಬಸವರಾಜ ಸಿಂದಗಿಮಠಗೆ ಒಲಿದ ಗಾನಸರಸ್ವತಿ…!!!

Listen to this article

ಗಾನಕೋಗಿಲೆ ಬಸವರಾಜ ಸಿಂದಗಿಮಠಗೆ ಒಲಿದ ಗಾನಸರಸ್ವತಿ

ಗುಳೇದಗುಡ್ಡ: ಬೆಳೆವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಪ್ರತಿಯೋರ್ವ ಯುವಕ ಯುವತಿಯರಲ್ಲಿ ಕಲೆ ಕುಶಲತೆ, ಪ್ರತಿಭೆ ಅಡಗಿರುತ್ತದೆ. ಅದಕ್ಕೆ ಪ್ರೋತ್ಸಾಹ ಪೋಷಣೆ ದೊರಕಿದಾಗ ಅದು ಚಿಗುರೊಡೆದು ಪರರಿಗೆ ಪರಮಾನಂದ ಪಸರಿಸುವಲ್ಲಿ ಮೊದಲಾಗುತ್ತದೆ. ಅದರಲ್ಲಿಯೂ ಕೂಡ ಸಂಗೀತ ಕಲೆ ಎಲ್ಲರನ್ನೂ ಕೈಬೀಸಿ ಆಕರ್ಷಿಸುತ್ತದೆ. ಆದರೆ, ಕೆಲವರಿಗೆ ಮಾತ್ರ ಒಲಿಯುತ್ತದೆ. ಇದಕ್ಕೆ ಸಾಕ್ಷಿಯೆಂಬಂತೆ ಗುಳೇದಗುಡ್ಡದ ಯುವ ಸಂಗೀತ ಪ್ರತಿಭೆ ಬಸವರಾಜ ಸಿಂದಗಿಮಠ ಅವರು ಒಬ್ಬರು.
ಬಸವರಾಜ ಅವರು ಮೂಲತಃ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದವರು. ಬಡತನದಲ್ಲಿ ಜನಿಸಿದ ಅವರು, ನಿತ್ಯ ನಸುಕಿನಲ್ಲಿ ಎದ್ದು ಮನೆಮನೆಗೆ ದಿನಪತ್ರಿಕೆಯನ್ನು ಹಂಚುತ್ತಾರೆ. ಮನೆಯ ಕಷ್ಟ ನೋಡಿ ನಗುವ ಜನರಿಗೆಲ್ಲ ಪಾಠ ಕಲಿಸಬೇಕು. ಆ ರೀತಿ ಮಾಡಬೇಕೆಂದರೆ ನಾನೇನಾದರೂ ಸಾಧನೆ ಮಾಡಬೇಕು ಎನ್ನುವ ಗುರಿ ಇಟ್ಟುಕೊಂಡು ಸಾಧನೆಯ ಒಂದೊಂದೆ ಮೆಟ್ಟಿಲು ಏರುತ್ತಿರುವ ಬಸವರಾಜನ ಯಶೋಗಾಥೆಯಿದು. ಕಷ್ಟದ ಬದುಕಲ್ಲಿ ಬೆಂದು ಗಾನ ಸರಸ್ವತಿಯನ್ನು ಒಲಿಸಿಕೊಂಡ ಪರಿ ಮಾತ್ರ ಅದ್ಭುತವಾದದ್ದು.
ಅವರು ಸದ್ಯ ಬಾದಾಮಿ ತಾಲೂಕಿನ ಚಿಕ್ಕಮುಚ್ಚಳಗುಡ್ಡದ ಆದರ್ಶ ವಿದ್ಯಾಲಯದಲ್ಲಿ ಸಂಗೀತ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗುಳೇದಗುಡ್ಡದಲ್ಲಿ ಶ್ರೀ ಗುರುಪುಟ್ಟರಾಜ ಸಂಗೀತ ಪಾಠಶಾಲೆಯನ್ನು ಪ್ರಾರಂಭಿಸಿ, ಅಂಧರಿಗೆ, ಅಂಗವಿಕಲರಿಗೆ ಉಚಿತ ಸಂಗೀತ ಶಿಕ್ಷಣ ನೀಡುತ್ತಿದ್ದಾರೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಜನಪದ ಗೀತೆಗಳನ್ನು ತಮ್ಮ ಸುಮಧುರ ಕಂಠದಿಂದ ಹಾಡಿ ನಾಡಿನಾದ್ಯಂತ ಜನರಿಗೆ ಚಿರಪರಿಚಿತರಾಗಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಈಗಾಗಲೇ ಸಾಕಷ್ಟು ಸಾಧನೆ ಮಾಡುವ ಮೂಲಕ ತಮ್ಮನ್ನು ಗುರುತಿಸಿಕೊಂಡಿದ್ದಾರೆ.
ಸಂಗೀತಭ್ಯಾಸ: ಬಾಲ್ಯದಿಂದ ಸಂಗೀತದ ಮೇಲೆ ಅಪಾರ ಆಸಕ್ತಿ ಹೊಂದಿದ್ದರಿಂದ ಸಂಗೀತ ಶಿಕ್ಷಕರಾದ ಶ್ರೀಕಾಂತಕುಮಾರ ಚಿಮ್ಮಲ ಅವರ ಗುಳೇದಗುಡ್ಡದ ಕುಮಾರೇಶ್ವರ ಸಂಗೀತ ಪಾಠಶಾಲೆಯಲ್ಲಿ ಪ್ರಾಥಮಿಕ ಸಂಗೀತ ಅಭ್ಯಾಸ ಮಾಡಿದರು. ಬಳಿಕ ಬಾಗಲಕೋಟೆಯ ನಟರಾಜ ಸಂಗೀತ ಪಾಠಶಾಲೆಯ ಚನ್ನವೀರ ಬನ್ನೂರ ಗವಾಯಿಗಳವರು, ಹುಸೇನಬಾಬು ನದಾಫ್ ಅವರಲ್ಲಿ ಸಂಗೀತಾಭ್ಯಾಸ ಮುಂದುವರಿಸಿದರು. ಗದಗದ ಪಂಡಿತ ಪುಟ್ಟರಾಜ ಗವಾಯಿಗಳವರ ಸಂಗೀತ ಪದವಿ ಮಹಾವಿದ್ಯಾಲಯದಿಂದ ಸಂಗೀತದಲ್ಲಿ ಜ್ಯೂನಿಯರ್, ಸೀನಿಯರ್, ವಿದ್ವತ್ ಹಾಗೂ ಎಮ್.ಮ್ಯೂಸಿಕ್ ಉನ್ನತ ಪದವಿಯನ್ನು ಪಡೆದಿದ್ದಾರೆ.
ಪ್ರತಿಭೆ ಅನಾವರಣ: ಕರ್ನಾಟಕ ರಾಜ್ಯದಾದ್ಯಂತ ಹಲವಾರು ವೇದಿಕೆಗಳಲ್ಲಿ ತಮ್ಮ ಸಂಗೀತ ಪ್ರತಿಭೆ ಮೆರೆಯುವ ಮೂಲಕ ಬಸವರಾಜ ಈ ಭಾಗದಲ್ಲಿ ಸಂಚಲನ ಮೂಡಿಸಿದ್ದಾರೆ. ಚಾಲುಕ್ಯ ಉತ್ಸವ, ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ, ಶ್ರೀರಂಗಪಟ್ಟಣದ ದಸರಾ ಮಹೋತ್ಸವ, ಮೈಸೂರಿನಲ್ಲಿನ ಜನಪದ ಜಾತ್ರೆ, ಬೇಂದ್ರೆ ಸಾಹಿತ್ಯ ವೇದಿಕೆ, ರಾಜ್ಯಮಟ್ಟದ ಕಲಾ ಪ್ರತಿಭೋತ್ಸವ, ಮೂಢಬಿದಿರೆಯ ಆಳ್ವಾಸ್ ನುಡಿಸಿರಿ, ರಾಜ್ಯಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಹಿಂದೂಸ್ತಾನಿ, ಜಾನಪದ, ಸುಗಮ ಸಂಗೀತದಿಂದ ಕೇಳುಗರ ಮನ ಸೆಳೆದಿದ್ದಾರೆ. ಇದಲ್ಲದೆ ಬೆಂಗಳೂರು, ಬೆಳಗಾಂ, ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ, ಬಳ್ಳಾರಿ, ಬಾಗಲಕೋಟೆ, ಬಾದಾಮಿ ಮತ್ತಿತರ ಕಡೆಗಳಲ್ಲಿ ಜರುಗಿದ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲೂ ತಮ್ಮ ಸುಮಧುರ ಕಂಠದಿಂದ ಪ್ರೇಕ್ಷಕರ ಹೃನ್ಮನ ತಣಿಸಿದ್ದಾರೆ.
ಜನಪದ ಇಷ್ಟ: ಜನಪದ ಗೀತೆ ಹಾಡುವುದೆಂದರೆ ಬಸವರಾಜ ಅವರಿಗೆ ಅತ್ಯಂತ ಪ್ರೀತಿ, ಕಾಡುವುದಕ್ಕೆ ಮಿತಿ ಇರಬೇಕು… ಮಾತನಾಡನ್ನಯ ಮಾತನಾಡು… ಮೂಲಿಮನಿ ಸುಬ್ಬಕ್ಕ… ಕಲಿಯುಗ ಕಾಲ ಬಂದೈತಿ, ಎಂತಾ ಮೋಜಿನ ಕುದುರೆ… ಹೀಗೆ ಆನೇಕ ಜನಪದ ಗೀತೆಯನ್ನು ಅತ್ಯಂತ ಸುಂದರವಾಗಿ ಹಾಡುತ್ತಾರೆ. ಇವರ ಅಭಿಮಾನಗಳಂತೂ ಹಾಡುವ ಜನಪದ ಗೀತೆಗೆ ಮೈಮರೆಯುತ್ತಾರೆ.
ಟಿ.ವಿ. ಕಾರ್ಯಕ್ರಮ: ಚಂದನವಾಹಿನಿ ನಡೆಸಿಕೊಡುವ ಗಾನಗರಡಿ ಸೀಸನ್-3, ಬಸವ ಟಿ.ವಿ., ಸರಳ ಜೀವನ, ಪಬ್ಲಿಕ್ ಟಿ.ವಿಯ ಬೆಳಕು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.
ಸಂದ ಪ್ರಶಸ್ತಿಗಳು: ಇವರ ಸಂಗೀತ ಪ್ರತಿಭೆಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಜಿಲ್ಲಾ ಗಣರಾಜ್ಯೋತ್ಸವ ಪ್ರಶಸ್ತಿ, ಮೇಘಮೈತ್ರಿ ಪ್ರಶಸ್ತಿ, ಚಂದ್ರಮುಕುಟ ಗೌರವ ಪ್ರಶಸ್ತಿ, ಕಾಯಕ ಪ್ರಶಸ್ತಿ, ಗಾನಕೋಗಿಲೇ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ…

ವರದಿ. ಸಚಿನ್, ಬಾಗಲಕೋಟ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend