ಅರಣ್ಯ ಒತ್ತುವರಿ ತೆರುವುಗೊಳಿಸಲು ಅರಣ್ಯ ಇಲಾಖೆ ಕಠಿಣ ಕ್ರಮ ವಹಿಸಿದೆ: -ವನ್ಯಜೀವಿ ಮಂಡಳಿ ಸದಸ್ಯೆ ವೈಶಾಲಿ ಕುಲಕರ್ಣಿ…!!!

Listen to this article

ಪ್ರಾಣಿ – ಮಾನವ ಸಂರ್ಘಷ ತಪ್ಪಿಸಲು ಸರ್ಕಾರ ಸೂಕ್ತ ಕ್ರಮಕೈಗೊಂಡಿದೆ; ಅರಣ್ಯ ಒತ್ತುವರಿ ತೆರುವುಗೊಳಿಸಲು ಅರಣ್ಯ ಇಲಾಖೆ ಕಠಿಣ ಕ್ರಮ ವಹಿಸಿದೆ: -ವನ್ಯಜೀವಿ ಮಂಡಳಿ ಸದಸ್ಯೆ ವೈಶಾಲಿ ಕುಲಕರ್ಣಿ

ಧಾರವಾಡ : ಅರಣ್ಯ ನಾಶದಿಂದ ಉಂಟಾಗುತ್ತಿರುವ ಪ್ರಾಣಿ ಮತ್ತು ಮಾನವ ಸಂರ್ಘಷವನ್ನು ತಪ್ಪಿಸಲು ತೊಂದರೆಯಲ್ಲಿರುವ ವನ್ಯಜೀವಿಗಳನ್ನು ಸಂರಕ್ಷಿಸಬೇಕು. ಮತ್ತು ಅವುಗಳ ಸ್ವಚ್ಛಂದ ಜೀವನವನ್ನು ಉಳಿಸಿ ಬೇಳಸಲು ಎಲ್ಲರೂ ಪ್ರಯತ್ನಿಸಬೇಕೆಂದು ಕರ್ನಾಟಕ ವನ್ಯಜೀವಿ ಮಂಡಳಿಯ ಸದಸ್ಯೆ ವೈಶಾಲಿ ಕುಲಕರ್ಣಿ ಅವರು ಹೇಳಿದರು.

ಅವರು ಇಂದು ಬೆಳಿಗ್ಗೆ ಅರಣ್ಯ ಇಲಾಖೆಯ ಧಾರವಾಡ ಪ್ರಾದೇಶಿಕ ವಿಭಾಗದ ಧಾರವಾಡ ವೃತ್ತದಿಂದ 70ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ಆಯೋಜಿಸಿದ್ದ ಕಾಲ್ನಡಿಗೆ ಜಾಥಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದರು.

ರಾಜ್ಯ ಸರ್ಕಾರವು ರಾಜ್ಯದ ವೈವಿಧ್ಯಮಯವಾದ ಅರಣ್ಯ, ಸಸ್ಯ ಸಂಪತ್ತು ಮತ್ತು ವನ್ಯ ಜೀವಿಗಳನ್ನು ಸಂರಕ್ಷಿಸಲು ಆಧ್ಯತೆ ನೀಡಿ ಹೊಸ ಕಾನೂನುಗಳನ್ನು ಜಾರಿಗೊಳಿಸುತ್ತಿದೆ. ಧಾರವಾಡ ಜಿಲ್ಲೆಯು ಅರೆ ಮಲೆನಾಡು ಆಗಿರುವದರಿಂದ ಬೆಳಗಾವಿ ಹಾಗೂ ಉತ್ತರಕನ್ನಡ ಜಿಲ್ಲೆಗಳ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಯ ಭೂಪ್ರದೇಶವನ್ನು ಹೆಚ್ಚು ಅರಣ್ಯೀಕರಣಗೊಳಿಸಲು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದು ಅವರು ಹೇಳಿದರು.

ಅರಣ್ಯ ನಾಶದಿಂದಾಗಿ ಪ್ರಾಣಿಗಳು ನಾಡಿಗೆ ಆಗಮಿಸುತ್ತಿದ್ದು, ಇದರಿಂದ ಮಾನವ ಹಾಗೂ ಪ್ರಾಣಿ ಸಂರ್ಘಷವು ದಿನದಿಂದ ದಿನಕ್ಕೆ ಸಾಮಾನ್ಯವಾಗುತ್ತಿದೆ. ಇದನ್ನು ತಪ್ಪಿಸಲು ಮತ್ತು ಅರಣ್ಯ ನಾಶವನ್ನು ತಡೆಗಟ್ಟಲು ಸರ್ಕಾರವು ಅರಣ್ಯ ಒತ್ತುವರಿ ತೆರವುಗೊಳಿಸಲು ಕಠಿಣ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಹೇಳಿದರು.
ಕಾಲ್ನಡಿಗೆ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿ, ಸಾಮಾನ್ಯವಾಗಿ ನಮ್ಮ ಜಿಲ್ಲೆಯ ಭೂಪ್ರದೇಶವನ್ನು ನೋಡಿದಾಗ ಶೇ. 33 ರಷ್ಟು ಅರಣ್ಯ ಪ್ರದೇಶ ಇರಬೇಕು. ಆದರೆ ಈಗ ಜಿಲ್ಲೆಯಲ್ಲಿ ಶೇ. 8.5 ರಷ್ಟು ಅರಣ್ಯವಿದೆ. ಜಿಲ್ಲೆಯಲ್ಲಿ ಕನಿಷ್ಠ ಶೇ. 20 ರಷ್ಟು ಭೂಪ್ರದೇಶವನ್ನು ಅರಣ್ಯೀಕರಣಗೊಳಿಸಲು ಅರಣ್ಯ ಇಲಾಖೆಯಿಂದ ನಗರ ಹಾಗೂ ಗ್ರಾಮೀಣ ಪ್ರದೇಶವನ್ನು ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಮಹಾತ್ಮ ಗಾಂಧೀ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಮೂಲಕ ಗ್ರಾಮೀಣ ಭಾಗದಲ್ಲಿ ರಸ್ತೆಗಳ ಎರಡು ಬದಿಯಲ್ಲಿ, ರೈತರ ಹೋಲ-ಬದುಗಳಲ್ಲಿ ಮತ್ತು ಕೆರೆ, ಸರ್ಕಾರಿ ಭೂಮಿ, ಹಳ್ಳದ ಮಗ್ಗಲುಗಳಲ್ಲಿ ವಿವಿಧ ರೀತಿಯ ಮರಗಳ ಸಸಿಗಳನ್ನು ನೆಡಲಾಗುತ್ತಿದೆ. ಸಂಘ, ಸಂಸ್ಥೆ ಹಾಗೂ ಸಾರ್ವಜನಿಕರ ಸಹಕಾರದಲ್ಲಿ ಹೆಚ್ಚು ಅರಣ್ಯ ಬೆಳಸಲು ಕ್ರಮವಹಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಧಾರವಾಡ ಜಿಲ್ಲೆಯಲ್ಲಿ ಕಲಘಟಗಿ, ಅಳ್ನಾವರ ಹಾಗೂ ಧಾರವಾಡ ತಾಲೂಕಿನ ಕೆಲವು ಪ್ರದೇಶ ಗಡಿ ಜಿಲ್ಲೆಗಳ ಅರಣ್ಯಕ್ಕೆ ಹೊಂದಿಕೊಂಡಿದ್ದು, ತಕ್ಕಮಟ್ಟಿಗೆ ಅರಣ್ಯದಿಂದ ಆವೃತವಾಗಿದೆ. ಸಾಮಾನ್ಯವಾಗಿ ಜಿಲ್ಲೆಯ ಅರಣ್ಯ ಹಾಗೂ ಅರಣ್ಯಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಕಾಡು ಪ್ರಾಣಿಗಳು ಆಗಾಗ ಕಾಣಿಸುತ್ತಿವೆ. ಅದರಲ್ಲೂ ಚಿರತೆ ಜಿಲ್ಲೆಗೆ ಆಗಮಿಸುತ್ತಿರುವ ಸಾಮಾನ್ಯವಾಗಿದೆ. ಮತ್ತು ಸೆಪ್ಟೆಂಬರ್ ಅಕ್ಟೋಬರ್ ತಿಂಗಳಲ್ಲಿ ಕಲಘಟಗಿ ಭಾಗದ ಅರಣ್ಯದಲ್ಲಿ ಆನೆಗಳು ಸಹ ಆಗಮಿಸಿ ಎರಡು ಮೂರು ತಿಂಗಳು ವಾಸಿಸುತ್ತಿವೆ ಎಂದು ಅವರು ಹೇಳಿದರು.

ಜಿಲ್ಲಾ ಉಪ ಅರಣ್ಯಸಂರಕ್ಷಣಾಧಿಕಾರಿ ವಿವೇಕ ಕವರಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಾಡು ಮತ್ತು ವನ್ಯಜೀವಿಗಳನ್ನು ಮುಂದಿನ ಪೀಳಿಗೆಗೆ ಉಳಿಸಿಕೊಡುವ ಮಹತ್ವದ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಅದಕ್ಕಾಗಿ ವನ್ಯಜೀವಿ ಸಪ್ತಾಹದ ನಿಮಿತ್ತ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವನ್ಯಜೀವಿಗಳ ಕುರಿತು ಪ್ರಬಂಧ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ಹಾಗೂ ಉರಗ ರಕ್ಷಕರಿಗೆ ತರಬೇತಿ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

70ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಅಕ್ಟೋಬರ್ 4 ರಂದು ಬೆಳಿಗ್ಗೆ 10 ಗಂಟೆಗೆ ಉರಗ ಸಂರಕ್ಷಣಾ ಕಾರ್ಯಾಗಾರವನ್ನು ಅರಣ್ಯ ಇಲಾಖೆಯ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದೆ. ಮತ್ತು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಮಧ್ಯಾಹ್ನ 2 ಗಂಟೆಯಿಂದ ಮಾನವ-ವನ್ಯಜೀವಿ ಸಹಬಾಳ್ವೆ ಕುರಿತು ಕಾರ್ಯಾಗಾರ ಆಯೋಜಿಸಲಾಗುವುದು. ಅಕ್ಟೋಬರ್ 5 ರಂದು ಅರಣ್ಯ ಸಂಕೀರ್ಣ ವಲಯದಲ್ಲಿ ಬೆಳಿಗ್ಗೆ 10 ಗಂಟೆಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ವ್ಹಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗುವುದು. ಅಕ್ಟೋಬರ್ 7 ರಂದು ಮೂರ್ತಿ ಟ್ರಸ್ಟ್ ವನಭವನದಲ್ಲಿ ಬೆಳಿಗ್ಗೆ 10 ಗಂಟೆಗೆ ವಿವಿಧ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗುವುದು. ಅಕ್ಟೋಬರ್ 8 ರಂದು ಮೂರ್ತಿ ಟ್ರಸ್ಟ್ ವನಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಉಪ ಅರಣ್ಯಸಂರಕ್ಷಣಾಧಿಕಾರಿ ವಿವೇಕ ಕವರಿ ಅವರು ತಿಳಿಸಿದರು.

ಕಾರ್ಯಕ್ರಮ ಪೂರ್ವದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪರಿಮಳಾ ವಿ.ಎಚ್. ಅವರು ವನ್ಯಜೀವಿ ಸಪ್ತಾಹ ಆಚರಣೆಯ ಪ್ರತಿಜ್ಞಾ ವಚನವನ್ನು ಭೋದಿಸಿ, ಮಾತನಾಡಿದರು.

ಕಾಲ್ನಡಿಗೆ ಜಾಥಾ: 70ನೇ ವನ್ಯಜೀವಿ ಸಪ್ತಾಹ ಅಂಗವಾಗಿ ಅರಣ್ಯ ಇಲಾಖೆಯಿಂದ ಇಂದು ಬೆಳಿಗ್ಗೆ ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯಿಂದ ಅರಣ್ಯ ಸಂಕೀರ್ಣದವರೆಗೆ ಜನಜಾಗೃತಿಗಾಗಿ ಕಾಲ್ನಡಿಗೆ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಾಗಿತ್ತು. ಜಾಥಾವು ಧಾರವಾಡ ಡಿಸಿ ಕಚೇರಿಯಿಂದ ಸರ್ ಎಂ. ವಿಶ್ವೇಶ್ವರಯ್ಯ ವೃತ್ತದ ಮೂಲಕ ಡೆಪ್ಯೂಟಿ ಚನ್ನಬಸಪ್ಪ ವೃತ್ತ, ಕರ್ನಾಟಕ ಕಾಲೇಜು ಸರ್ಕಲ್, ಹಳಿಯಾಳ ನಾಕಾ ಮಾರ್ಗವಾಗಿ ಅರಣ್ಯ ಇಲಾಖೆಯ ಅರಣ್ಯ ಸಂಕೀರ್ಣಕ್ಕೆ ಆಗಮಿಸಿ, ಮುಕ್ತಾಯಗೊಂಡಿತ್ತು.

ಕಾಲ್ನಡಿಗೆ ಜಾಥಾ ಕಾರ್ಯಕ್ರಮದಲ್ಲಿ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಶಿವಕುಮಾರ, ಕಾರ್ಯಯೋಜನೆ ವಿಭಾಗದ ಡಿಎಫ್‍ಓ ಪಿ. ಎಸ್. ವರೂರ, ವಲಯ ಅರಣ್ಯ ಅಧಿಕಾರಿ ಪ್ರದೀಪ ಎಸ್. ಪವಾರ, ಡಿಆರ್‍ಎಫ್‍ಓ ಯಲ್ಲಾ ನಾಯಕ ಸೇರಿದಂತೆ ಅರಣ್ಯ ಇಲಾಖೆಯ ಧಾರವಾಡ ವೃತ್ತದ ವಿವಿಧ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಪೂರ್ಣಾ, ಎಂಪವರ್ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend