ಪರಿಸರಕ್ಕಾಗಿ ನಾವು ವೇದಿಕೆಯಿಂದ ರಾಜ್ಯದ್ಯಂತ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದ ಪರಿಸರ ಪ್ರಿಯರು…!!!

Listen to this article

ಶ್ರೀ ಸಿದ್ದರಾಮಯ್ಯನವರು
ಮಾನ್ಯ ಮುಖ್ಯ ಮಂತ್ರಿಗಳು
ಕರ್ನಾಟಕ ಸರ್ಕಾರ
ಬೆಂಗಳೂರು

ಮಾನ್ಯರೇ,
ವಿಷಯ : ಈ ವರ್ಷದ ಮಳೆಗಾಲದಲ್ಲಿ ಕರಾವಳಿಯ ಹೆದ್ದಾರಿಗಳಾದ, ಅಂಕೋಲಾದ ಬಳಿ ಸಂಭವಿಸಿದ ಭೀಕರ ದುರಂತ ಹಾಗೂ ಬೆಂಗಳೂರು- ಮಂಗಳೂರು ಸಕಲೇಶಪುರದ ಬಳಿಯ ಭೂಕುಸಿತ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತೆಗೆದುಕೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆ ಮನವಿ ಸಲ್ಲಿಕೆ.

ಇತ್ತೀಚಿನ ವರ್ಷಗಳಲ್ಲಿ, ದೇಶದ ನಾನಾ ಭಾಗಗಳಲ್ಲಿ ತೀವ್ರ ಭೂಕುಸಿತಗಳು ಸಾಮಾನ್ಯವಾಗುತ್ತಿವೆ. ನಮ್ಮ ರಾಜ್ಯದ ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಭೂಕುಸಿತದಿಂದ ಅಪಾರವಾದ ಪ್ರಾಣ ಮತ್ತು ನೈಸರ್ಗಿಕ ಸಂಪತ್ತಿನ ಹಾನಿಯಾಗಿದೆ.
ಅಂಕೋಲಾದ ಬಳಿಯ ಹೆದ್ದಾರಿಯಲ್ಲಿ ಗುಡ್ಡ ಕುಸಿತವಾಗಿ ಅನೇಕ ಅಮಾಯಕರು ಪ್ರಾಣ ಕಳೆದುಕೊಂಡರು.
ಸಕಲೇಶಪುರದ ಬಳಿ ಭೂಕುಸಿತವಾಗಿ, ಕರಾವಳಿಯಿಂದ ಬೆಂಗಳೂರು ರೈಲು ಮಾರ್ಗ ಮತ್ತು ಬಸ್ ಮಾರ್ಗದಲ್ಲಿಯೂ ತುಂಬಾ ವ್ಯತ್ಯಯವಾಗಿ ಜನಸಾಮಾನ್ಯರು ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದಾರೆ. ಬೆಂಗಳೂರು,ಹುಬ್ಬಳ್ಳಿ, ಹಾಸನ ಕಡೆಯಿಂದ ಕರಾವಳಿ ಭಾಗಕ್ಕೆ ತಲುಪಬೇಕಾದ ಸಾಮಾನು ಸರಕುಗಳು, ಕರಾವಳಿ ಜನರಿಗೆ ತಲುಪದೇ ಬದುಕು ದುಸ್ತರವಾಗಿತ್ತು.
ಪ್ರತಿವರ್ಷವೂ ಚಾರ್ಮಾಡಿ ಹಾಗೂ ಶಿರಾಡಿ ಘಾಟ್ ಮಾರ್ಗದಲ್ಲಿ ಭೂ ಕುಸಿತವಾಗಿ ಮಾರ್ಗವು ವಾಹನ ಸಂಚಾರ ಯೋಗ್ಯವಾಗಿಲ್ಲದಿರುವುದು ಕರಾವಳಿ ಜನರಿಗೆ ಅನಿಶ್ಚಿತತೆಯನ್ನು ಉಂಟುಮಾಡಿದೆ.
೨೦೧೮ ರಲ್ಲಿ ಕೊಡಗಿನಲ್ಲಿ ಕೂಡ ಈ ರೀತಿಯ ಭೂಕುಸಿತಗಳಾಗಿ ಜನರ ಪ್ರಾಣ ಹಾಗೂ ಸಂಪತ್ತಿಗೆ ಹಾನಿ ಉಂಟಾಗಿತ್ತು.

ಈ ರೀತಿಯ ವ್ಯತ್ಯಯದಿಂದಾಗುವ ಅಪಾರ ಜನ, ಧನ ಹಾನಿ, ಬೇಸಿಗೆಯಲ್ಲಿ ರಾಜ್ಯದ ಮಲೆನಾಡು ಮತ್ತು ರಾಜ್ಯದ ರಾಜಧಾನಿಯಲ್ಲಿ ಕುಡಿಯುವ ನೀರಿಗೆ ಬರ, ನೀರಿನ ಬರದಿಂದ ಜಾನುವಾರಗಳ ಸಾವು ನೋವು, ಕಾಡಿಗೆ ಬೆಂಕಿ, ಅತಿ ಹಾಗೂ ಅನಾವೃಷ್ಟಿಯಿಂದಾಗಿ ಆಗುವ ಬೆಳೆಹಾನಿ ಇವೆಲ್ಲವೂ ಹವಾಮಾನ ಬದಲಾವಣೆಯನ್ನು ( Climate Change) ಸೂಚಿಸುತ್ತಿವೆ. ಈ ಬದಲಾವಣೆಯ ದುಷ್ಪರಿಣಾಮಗಳನ್ನು ನಾವು ಪ್ರತ್ಯಕ್ಷ ಅನುಭವಿಸುತ್ತಿದ್ದೇವೆ.

ಈ ಹವಾಮಾನ ಬದಲಾವಣೆಗೆ ನಮ್ಮ ಕೊಡುಗೆಯೂ ಸಾಕಷ್ಟಿದೆ:
೧. ಎಗ್ಗಿಲ್ಲದ ನಡೆದಿರುವ ರಸ್ತೆ ಅಗಲೀಕರಣ, ಅದಕ್ಕಾಗಿ ಮಾರ್ಗದಲ್ಲಿರುವ ಮರಗಳನ್ನು ನಿರ್ದಾಕ್ಷಿಣ್ಯವಾಗಿ ಕಡಿಯುವುದು, ಡೈನಾಮೈಟ್ ಬಳಕೆ, ಬುಲ್ಡೋಜರ್ ಬಳಕೆ, ಇವುಗಳಿಂದ ಭೂಪದರ ಸಡಿಲವಾಗಿ, ಭೂಕುಸಿತಕ್ಕೆ ಕಾರಣವಾಗಿವೆ.
೨. ಮಳೆ ನೀರು ಭೂಮಿಯಲ್ಲಿ ಇಂಗದೆ, ಏಕಕಾಲಕ್ಕೆ ನದಿ ಸೇರಿ, ಪ್ರವಾಹಕ್ಕೆ ಎಡೆಮಾಡಿ ಕೊಡುತ್ತಿದೆ. ಮಣ್ಣಿನ ಸವಕಳಿ ಕೂಡ ಅಧಿಕವಾಗಿದ್ದು, ಫಲವತ್ತಾದ ಮಣ್ಣು ಕೊಚ್ಚಿ ಹೋಗುತ್ತಿದೆ.
೩. ಅವೈಜ್ಞಾನಿಕ
ರಸ್ತೆ ಅಗಲೀಕರಣವು ( ಉದಾಹರಣೆ: ಗುಡ್ಡಗಳನ್ನು ೯೦ ಡಿಗ್ರಿ ಲಂಬವಾಗಿ ಕೊರೆದು, ಗಡಿಗೋಡೆಯು ಇಲ್ಲದಿರುವುದು) ಗುಡ್ಡಕುಸಿತಕ್ಕೆ ಕಾರಣವಾಗಿದೆ. ಮತ್ತು ಅಗಲೀಕರಣದಲ್ಲಿ ಜನಸಾಮಾನ್ಯರ ಸುರಕ್ಷತೆಗಾಗಿರುವ ನಿಯಮಗಳನ್ನು ಪಾಲಿಸದಿರುವುದು.

೪. ಅರಣ್ಯ ಪ್ರದೇಶಗಳ ಒತ್ತುವರಿ, ಅಕ್ರಮ ಗಣಿಗಾರಿಕೆ, ಜೀವವೈವಿಧ್ಯವುಳ್ಳ ಅರಣ್ಯ ಪ್ರದೇಶಗಳಲ್ಲಿ ಏಕಬೆಳೆಯ ನೆಡುತೋಪುಗಳು, ಇವೆಲ್ಲವೂ ಕರಾವಳಿ ಹಾಗೂ ಮಲೆನಾಡು ಪ್ರದೇಶಗಳ ವಿಶಿಷ್ಟತೆಯಾದ ತಂಪು ಹವಾಗುಣ, ಅಂತರ್ಜಲದ ಮಟ್ಟ, ನಿತ್ಯಜೀವನಕ್ಕೆ ಅಗತ್ಯವಾದ ಮರಮಟ್ಟುಗಳನ್ನು ನಾಶಮಾಡಿವೆ.

ಪಶ್ಚಿಮ ಘಟ್ಟ ಪ್ರದೇಶದ ಸೂಕ್ಷ್ಮತೆ ಮತ್ತು ಅದರ ಜಾಗತಿಕ ಮಹತ್ವವನ್ನು ಅರಿತು ಪ್ರೊ. ಮಾಧವ ಗಾಡ್ಗೀಳ್ ಅವರು 2011ರಲ್ಲಿ ವರದಿಯೊಂದನ್ನು ಸಲ್ಲಿಸಿದ್ದರು. ಆ ವರದಿಯಲ್ಲಿ ಪಶ್ಚಿಮ ಘಟ್ಟದ ಪರಿಸರಕ್ಕೆ ಹಾನಿಯಾಗುವಂತ ಯಾವುದೇ ಪ್ರಕ್ರಿಯೆಯನ್ನು ಕಟ್ಟುನಿಟ್ಟಾಗಿ ತಡೆಯಬೇಕೆಂದು ಶಿಫಾರಸು ಮಾಡಿದ್ದರು. ವರದಿಯ ಬಹುಮುಖ್ಯ ಅಂಶಗಳೆಂದರೆ, ಪಶ್ಚಿಮಘಟ್ಟಗಳ ಅತಿ ಸೂಕ್ಷ್ಮ ವಲಯಗಳಲ್ಲಿ ಬೃಹತ್ ಯೋಜನೆಗಳನ್ನು ನಿರ್ಮಿಸಬಾರದು, ಅಭಿವೃದ್ಧಿ ಯೋಜನೆಗಳಿಗೆ ಇಲ್ಲಿನ ಗುಡ್ಡಗಳನ್ನು ಕತ್ತರಿಸಬಾರದು, ಸುರಂಗ, ಜಲಾಶಯ ಹಾಗೂ ಆಣೆಕಟ್ಟುಗಳನ್ನು ಕಟ್ಟಬಾರದು,ಹೆದ್ದಾರಿ ಅಗಲೀಕರಣ ಮತ್ತು ಹೊಸ ರೈಲು ಮಾರ್ಗದಂತ ಯೋಜನೆಗಳನ್ನು ಕೈಗೊಳ್ಳಬಾರದು, ಹಾಲಿ ಇರುವ ಅರಣ್ಯ ಪ್ರದೇಶವನ್ನು ಉಳಿಸಿಕೊಳ್ಳಬೇಕು, ಯಾವುದೇ ಕಾರಣಕ್ಕೂ ಒತ್ತುವರಿಗೆ ಅವಕಾಶ ನೀಡಬಾರದು, ನದಿ ತಿರುವಿಗೆ ಮುಂದಾಗಬಾರದು, ಹಾನಿಕಾರಕ ರಾಸಾಯನಿಕಗಳನ್ನು ಬಳಸಬಾರದು. ಪರಿಸರ ರಕ್ಷಣೆಗೆ ಅತ್ಯಾವಶ್ಯಕವಾದ ಈ ನಿರ್ಬಂಧಗಳನ್ನು ಜಾರಿಗೊಳಿಸಬೇಕು.

ಗಾಡ್ಗೀಳ್ ವರದಿಯನ್ನು ಜಾರಿಗೊಳಿಸದ ಪರಿಣಾಮವನ್ನು ನಾವೀಗ ಅನುಭವಿಸುತ್ತಿದ್ದೇವೆ. ಎಂದೋ ಕೈಗೊಳ್ಳಬೇಕಾಗಿದ್ದ ಕ್ರಮಗಳನ್ನು ವಿಳಂಬವಾಗಿ ಇಂದಾದರೂ ತುರ್ತಾಗಿ ಕೈಗೊಳ್ಳಬೇಕೆಂದು ಈ ಅನಾಹುತಗಳು ನಮಗೆ ಎಚ್ಚರಿಕೆ ನೀಡುತ್ತಿವೆ. ಈಗಾಗುತ್ತಿರುವ ಅನಾಹುತಗಳಿಂದ ನಾವಿನ್ನೂ ಪಾಠ ಕಲಿಯದಿದ್ದರೆ,ಜನಸಾಮಾನ್ಯರ ಜೀವನ ಬಹಳ ದುಸ್ತರವಾಗುತ್ತದೆ.
ಇಂತಹ ಅನಾಹುತಗಳು ಮರುಕಳಿಸದಂತೆ ತಡೆಯುವ ಸಲುವಾಗಿ , ನಾನು ಈ ಕೆಳಗಿನ ಬೇಡಿಕೆಗಳನ್ನು ಸರ್ಕಾರದ ಮುಂದೆ ಮಂಡಿಸುತ್ತಿದ್ದೇನೆ:

1. ಪ್ರೊ. ಗಾಡ್ಗೀಳ್ ವರದಿ ಕುರಿತು ಜನರಲ್ಲಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಬೇಕು. ಆ ವರದಿಯ ಸಂಕ್ಷಿಪ್ತ, ಸರಳ ಕನ್ನಡ ಅನುವಾದ ಶೀಘ್ರ ತಯಾರಿಸಿ ಪ್ರತಿ ಪಂಚಾಯತಿಗೆ ತಲುಪಿಸಬೇಕು. ಸ್ಥಳೀಯ ಮಟ್ಟದಲ್ಲಿ ವರದಿ ಬಗ್ಗೆ ಚರ್ಚೆ ಮಾಡಿ, ಸ್ಥಳೀಯರ ಅಭಿಪ್ರಾಯ ಪಡೆದು ವರದಿ ಅನುಷ್ಠಾನವಾಗಬೇಕು. ಸೂಕ್ಷ್ಮ ಪ್ರದೇಶಗಳಲ್ಲಿ ನಡೆಯುತ್ತಿರುವ ಪರಿಸರಸ್ನೇಹಿಯಲ್ಲದ ಆರ್ಥಿಕ ಚಟುವಟಿಕೆಗಳನ್ನೇ ನೆಚ್ಚಿಕೊಂಡವರಿಗಾಗಿ ಪರ್ಯಾಯ ಜೀವನೋಪಾಯ ಯೋಜನೆಗಳನ್ನು ನಿರ್ದಿಷ್ಟ ಕಾಲಮಿತಿಯೊಳಗೆ ಅನುಷ್ಠಾನಗೊಳಿಸಬೇಕು.
2. ಕರಾವಳಿ ನಿಯಂತ್ರಿತ ವಲಯ (CRZ) ಮಾದರಿಯಲ್ಲಿ ಪಶ್ಚಿಮ ಘಟ್ಟದ ನದಿಗಳಿಗೆ ನದಿತಾಟಕ ನಿಯಂತ್ರಿತ ವಲಯ ಗುರುತಿಸಿ ಪರಿಸರ ವಿರೋಧಿ ಚಟುವಟಿಕೆಗಳನ್ನು ನಿಯಂತ್ರಿಸಬೇಕು.
3. ಪ್ರವಾಸೋದ್ಯಮ ಜಿಡಿಪಿ ವೃದ್ಧಿಯ ಒಂದು ಸಾಧನವಾಗಿರಬಾರದು. ಅದಕ್ಕೆ ಸರಕಾರದ ಪ್ರೋತ್ಸಾಹವಿರಬಾರದು ಮಾತ್ರವಲ್ಲ, ಅದಕ್ಕೆ ಮಿತಿಯಿರಬೇಕು.ಸೂಕ್ಷ್ಮ ಪ್ರದೇಶಗಳಲ್ಲಿ ಪ್ರವಾಸೋದ್ಯಮವನ್ನು ನಿಷೇಧಿಸಬೇಕು.
4. ಪ್ರತೀ ಪಂಚಾಯ್ತಿ, ಹೋಬಳಿ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಪರಿಸರ ಮತ್ತು ಜೀವವೈವಿಧ್ಯ ಸಂರಕ್ಷಣಾ ಪಡೆಯನ್ನು ರಚಿಸಬೇಕು. ಪ್ರತಿ ಪಂಚಾಯ್ತಿಯಲ್ಲಿ ಜೀವ ವೈವಿಧ್ಯ ದಾಖಲಾತಿ ಮಾಡಬೇಕು. ಯಾವುದೇ ಯೋಜನೆಗೆ Environmental Impact Assessment (EIA) ಮಾಡುವಾಗ ರಾಜಕೀಯೇತರ ತಜ್ಞರನ್ನು ಉಸ್ತುವಾರಿಗಳನ್ನಾಗಿ ಮಾಡಬೇಕು.
5. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ರಾಜ್ಯ ಮತ್ತು ಜಿಲ್ಲಾ ಮಟ್ಟದ ಸಮಿತಿಗಳಲ್ಲಿ ಕನಿಷ್ಠ ಒಬ್ಬೊಬ್ಬರು ಪರಿಸರ ವಿಜ್ಞಾನಿ, ಸರ್ಕಾರೇತರ ಸದಸ್ಯ, ಶಾಸಕ ಮತ್ತು ಪತ್ರಕರ್ತ ಇರಬೇಕು.
6. ಶೇಕಡಾ 21 ಇರುವ ಅರಣ್ಯ ಪ್ರದೇಶ ಶೇಕಡಾ 33ರಷ್ಟು ಆಗುವವರೆಗೆ ಅರಣ್ಯ ಪ್ರದೇಶವನ್ನು ಅರಣ್ಯೇತರ ಚಟುವಟಿಕೆಗೆ ಬಳಸಬಾರದು.
7. ಕೃಷಿ, ಅರಣ್ಯ ಅಥವಾ ಜೌಗು ಭೂಮಿಯನ್ನು ಬೇರೆ ಉದ್ದೇಶಗಳಿಗಾಗಿ ಬಳಸುವುದನ್ನು ಕಟ್ಟುನಿಟ್ಟಾಗಿ ತಡೆಯಬೇಕು. ಖಾಸಗಿ ಉದ್ಯಮಗಳಿಗಾಗಿ ಇಂತಹ ಪರಿವರ್ತನೆ ಆಗಲೇಬಾರದು. ಸಾರ್ವಜನಿಕ ಉದ್ದೇಶಕ್ಕಾಗಿಯೂ ಅದು ಅನಿವಾರ್ಯವಾದರೆ ಮಾತ್ರ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿ ಪರಿಸರ ಸ್ನೇಹಿಯಾಗಿ ಮಾಡಬೇಕು.
8. ಈಗ ಕುಸಿದ ಗುಡ್ಡಗಳಿಗೆ ತುರ್ತಾಗಿ ತಡೆಗೋಡೆ ಕಟ್ಟಬೇಕು. ಯಾವುದೇ ಕಾರಣಕ್ಕಾದರೂ ಗುಡ್ಡ ಕಡಿಯುವ ಸಂದರ್ಭ ಬಂದಾಗ ಪರಿಸರ ತಜ್ಞ ಸಮಿತಿಯ ಮಾರ್ಗದರ್ಶನದಲ್ಲಿ ಮಾಡಬೇಕು.
9. ಸೂಕ್ಷ್ಮ ವಲಯದಲ್ಲಿ ಯಾವುದೇ ಕಿರು ಯೋಜನೆಯನ್ನೂ EIA ಮತ್ತು ಪಬ್ಲಿಕ್ ಹಿಯರಿಂಗ್ ನಡೆಸದೆ, ಪರಿಸರ ತಜ್ಞ ಸಮಿತಿಯ ಒಪ್ಪಿಗೆಯಿಲ್ಲದೆ ಮಾಡಕೂಡದು. ಪರಿಸರ ತಜ್ಞ ಸಮಿತಿ ನ್ಯಾಯಾಂಗ ಅಧಿಕಾರವಿರಬೇಕು.
10. ಮರ ಉಳಿಸುವವರಿಗೆ ಹಾಗೂ ಏಕಬೆಳೆಯ ನೆಡುತೋಪಿನಲ್ಲಿ ಜೀವವೈವಿಧ್ಯ ಸ್ಥಾಪಿಸುವವರಿಗೆ ಪ್ರೋತ್ಸಾಹಧನ ನೀಡುವ ನೀತಿ ರೂಪಿಸಬೇಕು.
11. ಪಶ್ಚಿಮ ಘಟ್ಟ ಪರಿಸರದ ಮೇಲೆ ಒತ್ತಡ ಬೀಳದಂತೆ ಇತರ ಪ್ರದೇಶಗಳಲ್ಲಿ ನೀರಿನ ನಿರ್ವಹಣೆ ಸರಿಯಾಗಿ ಮಾಡಬೇಕು. ಸ್ಥಳೀಯವಾಗಿ ಲಭ್ಯವಿರುವ ನೀರಿನ ಸಮರ್ಪಕ ನಿರ್ವಹಣೆಯಾದರೆ ನದಿ ತಿರುವು ಯೋಜನೆಗಳ ಅಗತ್ಯವಿಲ್ಲ.

ಬೃಹತ್ ಪ್ರಮಾಣದ ಯೋಜನೆಗಳು ಯಾವಾಗಲೂ ಅಪಾಯಕಾರಿ. ಬೃಹತ್ ಅಣೆಕಟ್ಟುಗಳು, ಬೃಹತ್ ಸೇತುವೆಗಳು ಯಾವಾಗ ಮುರಿದು ಕುಸಿಯುತ್ತವೋ ಎಂಬ ಆತಂಕ ಮುಂದೆ ಹೆಚ್ಚಾಗಲಿದೆ. ಈ ಅನಾಹುತಗಳಿಗೆ ಬಲಿಯಾಗುವವರು ಬಹುತೇಕ ಬಡವರು. ಜನಸಾಮಾನ್ಯರ ಬದುಕನ್ನು ಹಸನು ಮಾಡದ ಯಾವುದೇ ಯೋಜನೆ ಅಭಿವೃದ್ಧಿಯಲ್ಲ. ಉದ್ದಿಮೆದಾರರ, ಗುತ್ತಿಗೆದಾರರ ಹಿತಾಸಾಕ್ತಿಗೆ ಮಣಿಯುವ ಬದಲಿಗೆ ಎಲ್ಲಾ ಜನರನ್ನೂ ಒಳಗೊಳ್ಳುವ, ಸ್ಥಳೀಯ ಆಡಳಿತವು ಒಪ್ಪಿಗೆ ಕೊಡುವಂತಹ ಯೋಜನೆಗಳನ್ನು ಮಾತ್ರ ಕೈಗೆತ್ತಿಕೊಳ್ಳಬೇಕು. ಜನಸಾಮಾನ್ಯರಿಗೆ ಹಿತ ಕೊಡುವ ಸುಸ್ಥಿರ ಅಭಿವೃದ್ಧಿ ಯೋಜನೆಗಳನ್ನು ರೂಪಿಸಬೇಕೆಂದು ನಾನು , ಜನಸಾಮಾನ್ಯರ. ಪರವಾಗಿ ಆಗ್ರಹಿಸುತ್ತಿದ್ದೇವೇ ಎಂದು ಮನವಿ…

ವರದಿ. ಎಂ. ಬಸವರಾಜ್ ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend