“ತ್ಯಾಗ ಬಲಿದಾನ ನೆನೆಯುವ ಭಾವೈಕ್ಯತೆಯ ಹಬ್ಬವೇ ಮೊಹರಂ”…!!!

Listen to this article

“ತ್ಯಾಗ ಬಲಿದಾನ ನೆನೆಯುವ ಭಾವೈಕ್ಯತೆಯ ಹಬ್ಬವೇ ಮೊಹರಂ”

ಜಾನಪದ ಕುಣಿತ ಪ್ರಕಾರಗಳಲ್ಲಿ ಮೊಹರಂ ಕುಣಿತ ಕೂಡ ಒಂದು. ಹತ್ತು ದಿನಗಳ ಕಾಲ ನಡೆಯುವ ಮೊಹರಂ ಹಬ್ಬ ಮೂಲ ಕಬರ್ಲಾದ ಘಟನೆಗಳ ಸಾಂಕೇತಿಕ ರೂಪವಾಗಿದೆ.
ಹಲವೆಡೆ ಮೂಲದಿಂದ ಭಿನ್ನವಾಗಿ ವಿಶಿಷ್ಟ ಆಚರಣೆಗಳನ್ನು ಅಳವಡಿಸಿಕೊಂಡಿದೆ. ಶೋಕಾಚರಣೆ ಮೂಲ ಉದ್ದೇಶವಾದರೂ, ಮೊಹರಂನ ಹಿನ್ನಲೆ ತಿಳಿಯದ ಜನರಲ್ಲಿ ಭಯ-ಭಕ್ತಿಯ ಜೊತೆಗೆ ಸಾಮಾನ್ಯವಾಗಿ ಹಬ್ಬಗಳಲ್ಲಿನ ಸಂಭ್ರಮ ಮನೆ ಮಾಡಿಕೊಂಡಿರುತ್ತದೆ.

ಮೊಹರಂನ ಅಂತಿಮ ದಿನದಲ್ಲಿ (ಕಬರ್ಲಾ ಬಲಿದಾನದ ಅಂತಿಮ ಕ್ಷಣಗಳು) ದೇವರು ಹೊಳೆಗೆ ಹೋಗುವ ಸಂಪ್ರದಾಯವಿದೆ. ಇದು ಕಬರ್ಲಾದಲ್ಲಿ ಕಾಲವಾದ ಶರಣರ ಪುಣ್ಯತಿಥಿಯಾಗಿದ್ದು, ಘಟಿಸಿ ಹೋದ ಕಬರ್ಲಾದ ದುರಂತಕ್ಕೆ ವಿಷಾದ ಸೂಚಿಸುವ ಹೃದಯಸ್ಪರ್ಶಿ ಕ್ಷಣಗಳ ನೆನಪಿಸುವ ಕಾಲವಾಗಿದೆ.
ಹತ್ತು ದಿನಗಳ ಕಾಲ ನಡೆಯುವ ಮೊಹರಂ ಆರಂಭ ಮಸೀದಿಯ ಮುಂದಿನ ಅಳಾಯಿ(ಅಲಾವಿ) ಕುಣಿ ತೋಡುವುದರೊಂದಿಗೆ ಆರಂಭವಾಗುತ್ತದೆ. ಅಲ್ಲಿಂದಲೇ ಹಬ್ಬದ ಸಂಭ್ರಮ ಗರಿಬಿಚ್ಚುತ್ತದೆ. ಇದಕ್ಕೆ ಗುದ್ದಲಿ ಹಾಕುವುದು ಎನ್ನುತ್ತಾರೆ.

ಆಚರಣೆ:
ಮುಸ್ಲಿಂ ಬಾಂಧವರೊಡಗೂಡಿ ಗುದ್ದಲಿ ಹಾಕುವುದು ಸಡಗರದ ವಿಷಯ. ಚಂದ್ರ ಕಾಣದಿದ್ದರೆ ಹಬ್ಬದ ಆರಂಭದ ದಿನ ಚಂದ್ರ ಕಾಣುವವರೆಗೂ ಮುಂದುವರೆಯುತ್ತದೆ. ಗುದ್ದಲಿ ಹಾಕುವ ಸಂಪ್ರದಾಯ ಕಬರ್ಲಾದಲ್ಲಿ ಧರ್ಮಯುದ್ದಕ್ಕೆ ಆಹ್ವಾನವಿತ್ತುದರ ಸಂಕೇತವಾಗಿದೆ. ನಂತರ ಕ್ರಮವಾಗಿ ಮೂರು, ಐದು ಮತ್ತು ಏಳು ದಿನಗಳು ಫಕೀರರಾಗುತ್ತಾರೆ. ಮುಸ್ಲಿಂರೊಂದಿಗೆ ಹಿಂದುಗಳು ಫಕೀರರಾಗುತ್ತಾರೆ.


ಕೆಳಗಡೆ ಮೇಲು ಜಾತಿಯ ಹಿಂದುಗಳು ಮಾತ್ರ ಫಕೀರರಾಗುತ್ತಾರೆ. ಖತಲ್ ರಾತ್ರಿಯ ದಿನ ಬಹಳಷ್ಟು ಜನರು ಫಕೀರರಾಗಲು ಇಷ್ಟಪಡುತ್ತಾರೆ. ಹೊಸ ಮಣ್ಣಿನ ಕೊಡಗಳಲ್ಲಿ ಬೆಲ್ಲದ ಪಾನಕ ಹೊತ್ತು ಹಲಗೆಗಳ ಸದ್ದಿನೊಂದಿಗೆ ಕೈಯಲ್ಲಿ ಹಸಿರು ಝಂಡಾಗಳನ್ನು ಹಿಡಿದು ಗುಂಪು ಗುಂಪಾಗಿ ಮಸೀದಿ ಗುಡಿಯ ಮುಂದಿನ ಅಲಾಯಿ ಕುಣಿ ಮತ್ತು ಮಸೀದಿಯನ್ನು ಸುತ್ತುವರೆಯುತ್ತಾ ಸಾಹುಸೇನ ಧೂಲ್ಲೇವ್’ ಎಂದು ಕೂಗುತ್ತಾರೆ. ಈ ತೆರನಾದ ಆಚರಣೆ ಬೇರೆ ಬೇರೆ ಕಡೆ ಬೇರೆ ಬೇರೆ ರೀತಿಯಲ್ಲಿರುತ್ತದೆ.
ಬೆಲ್ಲದ ಪಾನಕ ಅಥವಾ ಶರಬತ್ ಕೊಡುವ ಉದ್ದೇಶ ಯುಜೀದ್ನ ಕಡೆಯವರು ಮುತ್ತಿಗೆ ಹಾಕಿದಾಗ ಹುಸೇನರ ಪರಿವಾರಕ್ಕೆ ನೀರು ಸಿಕ್ಕದೆ ಪರಿತಾಪ ಪಟ್ಟಿದ್ದನ್ನು ಹಬ್ಬದಲ್ಲಿ ಸ್ಮರಿಸಿ ಅವರ ಸ್ಮರಣೆಯೊಂದಿಗೆ ಜನರಿಗೆ ಹಂಚುವುದಾಗಿದೆ. ತಕ್ಕ ಮಟ್ಟಿನ ವಿಸ್ತಾರದ ಮತ್ತು ಮನುಷ್ಯನಾಳದ ಹೊಂಡದಲ್ಲಿ, ಧಗಧಗಿಸಿವ ಬೆಂಕಿಯ ಸುತ್ತಾ ಅಲಾಯಿ ಕುಣಿತ ಶುರುವಾಗುತ್ತದೆ.
ತಾವು ಹರಕೆ ಹೊತ್ತಂತೆ ತಮ್ಮ ಇಷ್ಟಾರ್ಥಗಳು ಈಡೇರಿದುದರ ಫಲವಾಗಿ ಮೊಹರಂ ದೇವರಿಗೆ ಮಾಡಿಸಿ ತಂದ ಬೆಳ್ಳಿಯ ತೊಟ್ಟಿಲು, ಛತ್ರಿಗಳನ್ನು ಅರ್ಪಿಸುವುದು ಈ ವೇಳೆಯಲ್ಲಿಯೇ.
ಮೊಹರಂನ ಮುಖ್ಯ ದೇವರನ್ನು ಹೊರುವವರು ಹೆಚ್ಚಾಗಿ ಹಿಂದುಗಳೇ ಆಗಿರುತ್ತಾರೆ. ತಮ್ಮೆದುರುಗಡೆ ಸಾಲಾಗಿ ನಿಂತ ದೇವರುಗಳ ಸನ್ನಿಧಿಯಲ್ಲಿ ಕೂತವರು ಅದರಲ್ಲೂ ಮುಖ್ಯ ದೇವರನ್ನು ಹೊರುವವರು ಭಕ್ತಿಯ ಆವೇಶದಿಂದ ಚಡಪಡಿಸುತ್ತಿರುತ್ತಾರೆ. ಲೋಬಾನದ ಹೊಗೆಯಿಂದ ಮತ್ತು ಬುಕ್ಕಿಟ್ಟಿನ ಧೂಳಿನಿಂದ ತುಂಬಿದ ಮಸೀದಿಯಲ್ಲಿ ದೇವರು ಮೇಲೇಳುವುದನ್ನು ಕಾಯುತ್ತಾ ಕೂತವರ ನಿಲುವು, ಪೌಳಿಯಂತಹ ಭಾಗದಲ್ಲಿ ಮೌನವಾಗಿ ನೆರೆದ ಭಕ್ತ ಸಮೂಹದೊಂದಿಗೆ ಎದುರುಗಡೆ ಬಿಡುವಿಲ್ಲದೆ ಮುಂದುವರಿಯುವ ಅಲಾಯಿ ಕುಣಿತ. ಇವೆಲ್ಲಾ ಈ ಜನರ ದೈನಂದಿನ ಬದುಕಿನಲ್ಲಿ ಅನುಭವಕ್ಕೆ ಬರದಿರುವಂತಹ ಅಪೂರ್ವ ಅಲೌಕಿಕ ಪರಿಸರವೊಂದನ್ನು ಅನಾವರಣಗೊಳಿಸಿ ಬಿಡುತ್ತವೆ.
ನಿದರ್ಶನಕ್ಕೆ ಖತಲ್ ರಾತ್ರಿಯ ವೇಳೆ ಬೆಳಗಿನಜಾವ ಗುಂಗಾಡಿಯೊಂದು ದೇವರುಗಳ ಸುತ್ತ ಸುತ್ತುವರಿದ ಮೇಲೆಯೇ ದೇವರುಗಳು ಮೇಲೆದ್ದು ಊರಲ್ಲಿ ಸವಾರಿ ಹೊರಡುವೆವೆಂಬ ನಂಬಿಕೆ ಪ್ರಚಲಿತದಲ್ಲಿದೆ.

ಪೂಜಾ ವಿಧಾನ:
ಖತಲ್ ರಾತ್ರಿಯ ದಿನ ಬೆಳಗಿನ ಜಾವ ಎದ್ದ ದೇವರುಗಳು ಊರಲ್ಲಿ ಸವಾರಿ ಹೊರಟು ಅಥವಾ ಊರ ಹೊರಗೆ ದರ್ಗಾಗಳೇನಾದರು ಇದ್ದರೆ ಪಂಜಾಗಳು ಅಲ್ಲಿಗೆ ಹೋಗಿ ಪೂಜೆ ಸಲ್ಲಿಸಿ ಊರಲ್ಲಿ ಸವಾರಿಗೆ ಬರುತ್ತವೆ.
ಊರ ಓಣಿಗಳಲ್ಲಿ ಸವಾರಿ ಹೊರಟಾಗ ಜನರ ಭಕ್ತಿಯ ಪ್ರದರ್ಶನಕ್ಕೊಂದು ತಿರುವು ಮೂಡುತ್ತದೆ. ತುಂಬಿದ ಕೊಡಗಳಿಂದ ಮನೆಯ ಮುಂದೆ ನೆರೆದ ಹೆಂಗೆಳೆಯರು ದೇವರ ಕಾಲಿಗೆ ನೀರು ಸುರುವಿ ಊದುಬತ್ತಿ ಹಚ್ಚಿ ನಮಿಸುತ್ತಾರಲ್ಲದೇ, ಮೊಹರಂನ ಮುಖ್ಯ ಪಂಜಾ ಹೊತ್ತವರಿಗೆ ತಮ್ಮನ್ನು ತುಳಿದು ಹೋಗಲು ಹೇಳುತ್ತಾರೆ. ಅದುಕ್ಕೂ ಮುಂಚೆ ಗುಡಿಯಿಂದ ದರ್ಗಾಕ್ಕೆ ಹೊರಟಾಗ ಸಂತನಿಗೆ ನಮಿಸುತ್ತಾರೆ. ಆ ವೇಳೆಯಲ್ಲಿ ಐದಾರು ಜನರು ಹಿರಿಯರೊಡಗೂಡಿ ‘ಮೊಹರಂ’ನ ಮುಖ್ಯ ದೇವರು ದರ್ಗಾದ ಪಶ್ಚಿಮ ದಿಕ್ಕಿಗೆ ಸುಮಾರು ದೂರ ಆವೇಶದಿಂದ ಓಟದ ನಡಿಗೆಯಲ್ಲಿ ಸಾಗುತ್ತದೆ. ಅವರ ಹಿಂದೆ ಪಂಜು ಹಿಡಿದವರು, ನವಿಲು ಗರಿ ಬೀಸಿದವರು ಮಾತ್ರ ಹೋಗಬೇಕು.
ಮೊಹರಂ ದೇವರುಗಳು ಸವಾರಿ ಹೊರಟಾಗ ಇತರ ದೇವತೆಗಳ ಗುಡಿಗೆ ಭೇಟಿ ಕೊಡುವುದಲ್ಲದೇ ಹೇಳಿಕೆ (ಕಾರಣಿಕ) ಹೇಳುವಾಗ ಯಾವುದಾದರೊಂದು ದೇವಸ್ಥಾನವನ್ನು ಆರಿಸಿಕೊಳ್ಳುವುದು ವಾಡಿಕೆ. ಕೆಲವು ಊರಲ್ಲಂತೂ ಮೊಹರಂ ದೇವರ ಹೇಳಿಕೆ ರಾಮನ ಭಕ್ತ ಆಂಜನೇಯನ ಗುಡಿಯಲ್ಲೇ ನಡೆಯಬೇಕು. ಮಳೆ ಹಾಗೂ ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ಕೇಳುವುದು ಸರ್ವೇಸಾಮಾನ್ಯ.

ಸಂಬಂಧ:
ಊರೊಟ್ಟಿನ ಸಮಸ್ಯೆಗಳನ್ನು ವಿವರಿಸಿ ಅದಕ್ಕೆ ಪರಿಹಾರ ಹತ್ತಿರದಲ್ಲಿದೆಯೋ ದೂರದಲ್ಲಿದೆಯೋ ಎಂಬ ವಿಷಯದ ಬಗ್ಗೆ ಹೆಚ್ಚಿನ ಆಸ್ಥೆ ಬಹುತೇಕ ಹಿರಿಯರದಾಗಿರುತ್ತದೆ. ಇಂತಹ ಸಂದಂರ್ಭಗಳಲ್ಲಿ ದೇವರು ಮನುಷ್ಯ ಸಹಜವಾಗಿ ವರ್ತಿಸಿ ಅದಾಗದೆಂದು ಪಟ್ಟು ಹಿಡಿಯುವುದು. ಅಲ್ಲಿನ ಭಕ್ತರೆಲ್ಲಾ ಇದು ಆಗಲೇಬೇಕೆಂದು ಹಠ ಹಿಡಿಯುವುದು ಆ ಪರಿಸರದಿಂದ ಹೊರಗೆ ನಿಂತು ನೋಡುವವನಿಗೆ ಬಹು ಮೋಜಿನದಾಗಿ ಕಂಡುಬರುತ್ತದೆ.
ಇಲ್ಲಿ ದೇವರು ಮತ್ತು ಭಕ್ತವೃಂದದ ಸಂಬಂಧ ತಂದೆ ಮಕ್ಕಳ ಬಾಂಧವ್ಯವಾಗಿ, ತಂದೆ ಮಕ್ಕಳ ಮೇಲೆ ಕೋಪಿಸಿಕೊಂಡಾಗ ವರ್ತಿಸುವಂತೆ ದೇವರು ಹಠ ಮಾರಿಯಾಗಿ ಚಂಡಿ ಹಿಡಿಯುವುದು ಮನೋಙ್ಞವಾಗಿರುತ್ತದೆ. ಇಂತಹ ಬೇಡಿಕೆಗಳಾವುವು ಸ್ವಂತದಾಗಿರದೇ ಹೆಚ್ಚಾಗಿ ಸಾರ್ವಜನಿಕವಾಗಿರುತ್ತದೆ.

ಕಾರಣಿಕ:
ಇಸ್ಲಾಂ ಧರ್ಮ ವನ್ನು 1400 ಹಿಂದೆ ಮೊಹಮ್ಮದ್ ಪೈಗಂಬರು ಸ್ಥಾಪಿಸಿದರು. ಪೈಗಂಬರರು ಒಬ್ಬ ಧಾರ್ಮಿಕ ನಾಯಕರು ಮತ್ತು ರಾಜಕೀಯ ನಾಯಕರಾಗಿದ್ದರು. ಇವರು ದೇವರ ಸಂದೇಶವನ್ನು ದೇವ ಕನ್ಯೆ ಗೇಬ್ರಿಲ್ ದಿಂದ ತಿಳಿದು ಪವಿತ್ರ ರಂಜಾನ ಮಾಸದಲ್ಲಿ ಕುರಾನ್ ಬರೆದರು. ಇವರು ಬರೆದ ಈ ಮೂಲ ಕುರಾನನ್ನು ಮೆಕ್ಕಾ ಕುರಾನ್ ಪಾಠಗಳು ಎಂದು ಕರೆಯುತ್ತಾರೆ.
ಇದು ಶಾಂತಿ ಸಾರುವ ಕುರಾನ್ ಎಂದು ನಂಬಲಾಗಿದೆ. ನಂತರ ಇಸ್ಲಾಂ ಧರ್ಮದ ವಿಸ್ತಾರಕ್ಕೆ ಸೌದಿ ಅರೇಬಿಯಾದ ಮೂಲ ನಿವಾಸಿಗಳು ವಿರೋಧ ವ್ಯಕ್ತಪಡಿಸಿದಾಗ ಪೈಗಂಬರರು ಮೆಕ್ಕಾ ದಿಂದ ಮದೀನಾಕ್ಕೆ ವಲಸೆ ಬಂದರು. ಆ ನಂತರ ರಾಜಕೀಯ ಪ್ರೇರಣೆಯಿಂದ ಬಂದ ಕುರಾನ್ ನ್ನು ಮದೀನಾ ಕುರಾನ್ ಪಾಠಗಳೆಂದು ಕರೆಯಲಾಗುತ್ತದೆ.

ಈ ಬಾರಿಯ ಮೊಹರಂ:
ಅಮಾವಾಸ್ಯೆ ನಂತರ ಮೂರನೇ ದಿನದಂದು ಗುದ್ದಲಿ ಹಾಕುವುದರೊಂದಿಗೆ ಪ್ರಾರಂಭವಾಗಿದೆ. ಹತ್ತನೇ ದಿನವಾದ ದಿನಾಂಕ:17/07/2024ನೇ ಬುಧವಾರ ಮೊಹರಂ ಹಬ್ಬದ ಕೊನೆಯ ದಿನವಾಗಿದೆ…

ವರದಿ – ಮೈಲನಹಳ್ಳಿ ದಿನೇಶ್ ಕುಮಾರ್..

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend