ಮಕ್ಕಳ ಸದ್ಗುಣಗಳನ್ನು ಪ್ರಕಾಶಿಸುವಂತೆ ಮಾಡುವುದೆ ಶಿಕ್ಷಕರ ಧರ್ಮ…!!!

Listen to this article

ಮಕ್ಕಳ ಸದ್ಗುಣಗಳನ್ನು ಪ್ರಕಾಶಿಸುವಂತೆ ಮಾಡುವುದೆ ಶಿಕ್ಷಕರ ಧರ್ಮ

ಮಕ್ಕಳು ಬಲು ಚುರುಕಿನ ಜೊತೆಗೆ ಸೂಕ್ಷ್ಮತೆ ಹೊಂದಿರುತ್ತಾರೆ. ಕೂತಲ್ಲಿ ಕೂರದೆ ನಿಂತಲ್ಲಿ ನಿಲ್ಲದೆ ಚಟಪಟ ಜಿಗಿಯುತ್ತಿರುತ್ತಾರೆ. ಆದ್ದರಿಂದಲೇ ಮಕ್ಕಳ ಮನಸ್ಸು ಮರ್ಕಟನಂತೆ ಎನ್ನುವರು. ದೊಡ್ಡವರೇ ಮೊಬೈಲ ಗೀಳಿನಿಂದಲೋ ಮತ್ತೇನೊ ಗುಂಗಿನಲ್ಲೋ ಮಂಗನಂತೆ ಆಡುವುದನ್ನು ನೋಡಿದಾಗ ಮಕ್ಕಳ ಅತಿರೇಕದ ವರ್ತನೆಗಳು ಸಹಜವೆನಿಸದೆ ಇರಲಾರವು! ಮಕ್ಕಳು ವಿಕಾಸವಾಗುವ ಮನಸ್ಸಿನ ಕುಡಿಗಳು. ಬಹಳ ತಾಳ್ಮೆಯಿಂದ ಪಾಲಕರು ಹಾಗು ಶಿಕ್ಷಕರು ಗಮನಿಸಿ ಮಕ್ಕಳ ಇಷ್ಟ ಕಷ್ಟಗಳ ಅರಿತು ಕಲಿಕೆಯನ್ನು ಪ್ರೋತ್ಸಾಹಿಸುತ್ತಿರಬೇಕು. ಮಕ್ಕಳು ಪ್ರಕೃತಿಯ ನೈಜ ಸಂಕೇತಗಳು. ಹೂವು ಅರಳಿದಂತೆ ಗಾಳಿ ಬೀಸಿದಂತೆ ನೀರು ಹರಿವಂತೆ ಮಕ್ಕಳು ಯಾವುದೇ ಪೂರ್ವೋದ್ದೇಶಗಳಿಲ್ಲದೆ ತಮ್ಮ ಸುತ್ತಲ ಪರಿಸರದ ಪ್ರಚೋದನೆಗಳಿಗೆ ಪ್ರತಿಕ್ರಿಯಿಸುತ್ತಾರೆ. ಹಲವೊಮ್ಮೆ ಮಕ್ಕಳ ಸಹಜ ಮಾತು ವರ್ತನೆಗಳು ದೊಡ್ಡವರಿಗೆ ಅಸಹಜ ಕೀಟಲೆ ಎನಿಸುವವು. ಮಕ್ಕಳ ವಯಸ್ಸು ಹಾಗೂ ಅವರ ಮನಸ್ಸು ಅರ್ಥಮಾಡಿಕೊಂಡರೆ ನಾವು ಸರಿಯಾಗಿ ಅವರಿಗೆ ಮಾರ್ಗದರ್ಶನ ಮಾಡಬಹುದು. ಅದರಲ್ಲು ವಿಶೇಷವಾಗಿ ಮಕ್ಕಳ ಮನೋವಿಜ್ಞಾನ ಕಲಿಕೆ ಅನುಕೂಲಿಸುವ ಶಾಲಾ ಶಿಕ್ಷಕರಿಗೆ ಅರಿವಿರಲೇಬೇಕು.

ಆಟ ಆಡುವ ವಯಸ್ಸಿನವರ ಕೂರಿಸಿ ಇಂದು ಪಾಠ ಕಲಿಸುತ್ತಿರುವುದನ್ನು ಕಾಣುವೆವು. ಮೂರನೇ ವಯಸ್ಸು ಇನ್ನು ಆಟ ತುಂಟಾಟಗಳಲ್ಲಿ ತಲ್ಲೀನವಾಗಬೇಕೆಂದು ಹಂಬಲಿಸುವುದು. ಇಂದಿನ ಕಿಂಡರ್ ಗಾರ್ಟನ್ ಹೆಸರಿನ ಪ್ರಿಕೆಜಿ ಎಲ್ ಕೆ ಜಿ ಹಾಗು ಯುಕೆಜಿಗಳ ಶಿಕ್ಷಕರು ಆಟಗಳಿಗಿಂತ ಮಕ್ಕಳಿಗೆ ಪದ್ಯ ಅಂಕಿ ಸಂಖ್ಯೆ ಮಗ್ಗಿ ಕಥೆಗಳ ಕಂಠಪಾಠ ಮಾಡಿಸಲು ಯತ್ನಿಸುತ್ತಾರೆ. ತರಗತಿಯಲ್ಲಿನ ಮೂವತ್ತು ನಲವತ್ತು ಮಕ್ಕಳಲ್ಲಿ ಚುರುಕಾಗಿ ಕಲಿತ ಒಂದಿಬ್ಬರು ಇಡಿ ತರಗತಿಯ ಆಕರ್ಷಣೆಯಾಗಿ ಉಳಿದ ಮಕ್ಕಳಿಗು ಕಲಿಯುವ ಒತ್ತಡ ಸೃಷ್ಟಿ ಮಾಡುವರು. ಪಾಲಕರು ಸಹ ಅವರಂತೆ ನೀನು ಹೇಳಬೇಕು ಬರೆಯಬೇಕು ನೆನಪಿಟ್ಟುಕೋಬೇಕು ಎಂದು ದುಂಬಾಲು ಬಿದ್ದು ಮಕ್ಕಳ ಮನಸ್ಸಿಗೆ ಘಾಸಿ ಮಾಡುವರು.

ಯಾಕೆ ಕಲಿಯಬೇಕು ಎಂಬ ಅರಿವಿಲ್ಲದ ವಯಸ್ಸಿನಲ್ಲಿ ಶಾಲೆಗಳ ನಾಲ್ಕು ಗೋಡೆಗಳ ಮಧ್ಯ ಬಂಧಿಯಾದ ಮಕ್ಕಳು ವಿವಿಧ ಓದು ಬರಹ ಪುಸ್ತಕಗಳ ಉರು ಹೊಡೆಯುವ ವಿಧಾನಗಳಿಂದ ಹೈರಾಣಾಗುವರು. ಪ್ರತಿ ಮಗುವು ವಿಭಿನ್ನ ವಿಶಿಷ್ಟ. ಭಾರತೀಯ ಶಿಕ್ಷಣ ತಜ್ಞರಾದ ರವೀಂದ್ರನಾಥ ಠಾಗೋರರು ಮಕ್ಕಳು ಪ್ರಕೃತಿಯ ಶಿಶುಗಳು ಭವಿಷ್ಯದ ಪ್ರಕೃತಿಯ ಪಾಲಕರು ಹಾಗಾಗಿ ನಿಸರ್ಗದಲ್ಲಿ ಸಹಜ ಸ್ವಚ್ಚಂದ ಕಲಿಕೆಗೆ ಮಕ್ಕಳನ್ನು ರೂಢಿಸಬೇಕು ಎಂದರು. ಅಂದರೆ ಮಕ್ಕಳು ಕುಟುಂಬದ ಹಿರಿಕಿರಿಯರ ಸಂಬಂಧ ಅನುಬಂಧಗಳನ್ನು, ನೆರೆಹೊರೆಯ ಸಹಕಾರ ಪರೋಪಕಾರಗಳನ್ನು, ನಿಸರ್ಗದ ಮಳೆ ಗಾಳಿ ನೀರು ಚಲನೆ ಅವಶ್ಯಕತೆಗಳನ್ನು, ಗಿಡ ಮರ ಬಳ್ಳಿ ಪೊದೆಗಳ ವಿಸ್ಮಯತೆಗಳನ್ನು, ಮಣ್ಣು ಆಕಾಶ ಸಾಗರ ನದಿಗಳ ವಿಶಾಲತೆ ಘನತೆಗಳನ್ನು, ಸಾವಿರಾರು ಪ್ರಾಣಿ ಪಕ್ಷಿ ಕೀಟ ಜಲಚರಗಳ ಅಪೂರ್ವ ಜೀವನ ಅದ್ಭುತಗಳನ್ನು ಅನುಭವಿಸುತ್ತಾ ಕಲಿಯಬೇಕು.

ಶಾಲೆಗಳ ಶಿಕ್ಷಕರು ಮಕ್ಕಳ ಮನೆ ಪರಿಸರ ತಂದೆ ತಾಯಿಗಳ ಹಿನ್ನೆಲೆ ಅರಿತು ಮಕ್ಕಳ ಬೌದ್ಧಿಕ ಭಾವನಾತ್ಮಕ ಮಟ್ಟ ಗುರುತು ಮಾಡಿಕೊಳ್ಳಬೇಕು. ಯಾವ ಮಗು ಯಾವ ವಿಷಯಕ್ಕೆ ಹೇಗೆ ಪ್ರತಿಕ್ರಿಯಿಸುವರು ಎಂಬುದನ್ನು ಸೂಕ್ಷ್ಮವಾಗಿ ಅವಲೋಕಿಸಿ ತಾಳೆ ಮಾಡಿಕೊಳ್ಳಬೇಕು. ಅವರಿಗಿಷ್ಟದ ವಸ್ತು ವಿಷಯಗಳ ದಾಖಲಿಸಿಕೊಳ್ಳಬೇಕು. ಊಟ ತಿಂಡಿ ಉಡುಪು ಬಣ್ಣ ಗೆಳೆತನ ಮಾತು ಹಾಡು ಹಾವಭಾವಗಳ ಗಮನಿಸಿ ಬರೆದಿಟ್ಟುಕೊಳ್ಳಬೇಕು. ಇವೆಲ್ಲ ಮಕ್ಕಳ ಮನಸ್ಸಿನ ಶಕ್ತಿ ಕಲಿಯುವ ವೇಗ ಗ್ರಹಣ ಸಾಮರ್ಥ್ಯ ಅರಿಯಲು ಸಹಾಯಕ. ಮುಂದೆ ಪಾಠಗಳ ಪದ್ಯಗಳ ಇನ್ನಿತರ ವಿಷಯಗಳ ಆದಷ್ಟು ಹಾಡು, ನೃತ್ಯ, ಪ್ರಾತ್ಯಕ್ಷಿಕೆ, ಪರಿಸರದ ಒಡನಾಟದ ದರ್ಶನ, ಚಟುವಟಿಕೆಗಳು, ಯೋಜನೆಗಳು, ವಸ್ತುಗಳ ಆಟಿಕೆಗಳ ಮೂಲಕ ಕಲಿಸಲು ಪ್ರಯತ್ನಿಸಬೇಕು. ಪಾಠಗಳ ಅರ್ಥೈಸಲು ವಿವಿಧ ಕಲಿಕಾ ವಿಧಾನಗಳ ಶಿಕ್ಷಕರು ಗುರುತಿಸಿಕೊಳ್ಳಬೇಕು. ಕೀಟಲೆ ತಂಟೆ ತಾಪತ್ರಯದ ಮಾತು ವರ್ತನೆಗಳ ಸುಧಾರಿಸಲು ತಾಳ್ಮೆಯ ಮಾತುಕತೆ ಸಂವಹನ ಮಾಡಬೇಕು. ಕಲಿಕೆ ಸಂಪೂರ್ಣ ಕಂಠಪಾಠವಾಗದೆ ಅರ್ಥಮಾಡಿಕೊಳ್ಳುವ ವಿಧಾನಗಳಾದರೆ ಮಾತ್ರ ಶಾಶ್ವತವಾಗಿ ಮನನವಾಗುವುದು.

ತಂದೆ ತಾಯಿ ಪೋಷಕರಿಗು ವಿವಿಧ ಸಭೆಗಳಲ್ಲಿ ಅವರ ಮಕ್ಕಳ ವಿಭಿನ್ನತೆ ಅಭಿರುಚಿಗಳ ತಿಳಿಸಿ ಅದಂರಂತೆ ಮಕ್ಕಳ ಕಲಿಕೆ ಪ್ರೋತ್ಸಾಹಿಸಲು ಹುರಿದುಂಬಿಸಬೇಕು. ಹೋಲಿಸುವ ಮನೋಭಾವ ತಪ್ಪಿಸಿ ಇನ್ನೊಬ್ಬರಂತೆ ಆಗುವ ಹಟದ ಭಾವನೆ ಮಕ್ಕಳಲ್ಲಿ ತುಂಬದಿರಲು ತಿಳಿ ಹೇಳಬೇಕು. ಹೂ ತೋಟದಿ ಒಂದೇ ಬಗೆಯ ಪುಷ್ಪ ಗಿಡಗಳಿದ್ದರೆ ಹೆಚ್ಚು ಮಹತ್ವವು ಇರದು ಆಕರ್ಷಣೆಯು ಇರದು. ನೂರು ವಿಭಿನ್ನ ವಿಶಿಷ್ಟ ಹೂಗಿಡಗಳ ರಾಶಿಯಿದ್ದರೆ ಸೊಗಸು. ನಿಜ ಬದುಕು ಸಹ ಹೀಗೆ ಅಲ್ಲವೇ. ನಾವೆಲ್ಲ ಪುಷ್ಪಗಳು. ಒಂದೊಂದು ಒಂದು ಬಗೆ ಗುಣ ಹೊಂದಿರುತ್ತೇವೆ. ಹಾಗೆಯೇ ನಮ್ಮ ಮಕ್ಕಳು. ಯಾವ ಹೂವು ವ್ಯರ್ಥವಲ್ಲ. ಯಾವ ಮಗುವು ಅನುಪಯೋಗಿಯಲ್ಲ. ಬೇಲಿ ಮೇಲಿನ ತೊಂಡೆ ಹೂವು ಕಾಡ ಮಲ್ಲಿಗೆ ಹೂವಿಗು ಮಹತ್ವ ಇದೆ. ವನಸುಮದೊಲೆನ್ನ ಜೀವನವು ವಿಕಸಿತವಾಗುವಂತೆ ಮನವನು ಅನುಗೊಳಿಸು ಹೇ ದೇವ ಎಂದು ಮಹಾ ತಾತ್ವಿಕರು ಪಂಡಿತರು ಆಗಿದ್ದ ಡಿವಿಜಿ ಒಂದು ಕವಿತೆಯಲ್ಲಿ ಹಾಡಿದ್ದಾರೆ. ಕಾಡಿನ ಹೂವ ಯಾರ ಕಣ್ಣಿಗು ಬೀಳದು ಆದರೆ ಹಾದಿ ಬದಿಯಲ್ಲಿ ಹೋಗುವಾಗ ಆ ಹೂವುಗಳ ಘಮ ನಮ್ಮ ಆವರಿಸದೆ ಇರದು! ನಮ್ಮ ಮಕ್ಕಳು ಹಾಗಾಗಬೇಕು!

ಪ್ರತಿ ಮಗುವು ಗುಣಗಳ ಗಣಿ. ಕಲೆಗಳ ಆಗರ. ಸಂಸ್ಕೃತಿ ಸಲ್ಲಾಪಗಳ ಸಾಗರ. ಸಂಸ್ಕಾರ ಸದ್ಗುಣಗಳ ಮೂರ್ತಿ. ಮನೆ ಮನೆತನ ಬೆಳಗುವ ಕೀರ್ತಿ. ಕುವೆಂಪುರವರು ಹೇಳಿದಂತೆ ಮಕ್ಕಳು ಖಾಲಿ ಚೀಲಗಳಲ್ಲ. ಅವರಲ್ಲಿಯೂ ಅರಿವಿನ ಆತ್ಮವಿರುತ್ತದೆ. ಸದ್ಗುಣಗಳ ಖಜಾನೆಯಿರುತ್ತದೆ. ಅವಕಾಶ ಸಂದರ್ಭ ಸನ್ನಿವೇಶಗಳ ಒದಗಿಸಿ ಮಾನವ ಸಮಾಜದಿ ಸದ್ವರ್ತನೆಗಳ ತೋರಲು ಹುರಿದುಂಬಿಸುತ್ತಿರಬೇಕು. ವರ್ತನೆಗಳ ಪರಿವರ್ತನೆಯ ಕಲಿಕೆ. ಸದ್ವರ್ತನೆಗಳ ಪೋಷಿಸುವುದೇ ಶಿಕ್ಷಕರ ಧರ್ಮ. ದಿನವು ತೋಟದ ಮಾಲಿಯಂತೆ ಮಕ್ಕಳೆಂಬ ಭವಿಷ್ಯದ ಫಲವತ್ತಾದ ಬೆಳೆಗಳನ್ನು ಮೈಯೆಲ್ಲ ಕಣ್ಣಾಗಿ ಕಾಯಬೇಕು. ಅಗತ್ಯ ಕಲೆ ಸಾಹಿತ್ಯ ನೃತ್ಯ ಕತೆ ಕವಿತೆ ಚಟುವಟಿಕೆ ಹಾಡುಗಳ ಮೂಲಕ ಮಕ್ಕಳ ನೈಜ ಸಾತ್ವಿಕ ಶಕ್ತಿ ಹೊರಹೊಮ್ಮಲು ನೆರವು ನೀಡಬೇಕು. ಶಿಕ್ಷಕರಾಗಿ ವೃತ್ತಿಗೆ ಸೇರಿದಾಕ್ಷಣ ಆರಾಮವಾಯಿತು ಬದುಕು ಎಂದು ಭಾವಿಸಬಾರದು. ನಮ್ಮ ಮುಂದಿರುವ ಅಗಣಿತ ಶಕ್ತಿ ಚೈತನ್ಯಗಳಾದ ಮಕ್ಕಳ ಬದುಕು ಹಸನಾಗಿಸುವುದೇ ಶಿಕ್ಷಕರ ಬದುಕಿನ ಅದಮ್ಯ ಗುರು ಹಾಗು ಬದುಕಿನ ಮೂಲ ಧರ್ಮವಾಗಬೇಕು. ಮಕ್ಕಳ ಅಭಿವೃದ್ಧಿ ವಿಕಾಸ ಪ್ರಗತಿಯಲ್ಲಿ ಶಿಕ್ಷಕರ ವೃತ್ತಿಧರ್ಮ ಕಾಣುತ್ತಿರುತ್ತದೆ.


ಟಿ.ಪಿ.ಉಮೇಶ್
ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend