ಯಾದಗಿರಿ  ನಗರ ಠಾಣೆಯಲ್ಲಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪರಶುರಾಮ (34) ಅವರು ಹೃದಯಾಘಾತದಿಂದ ಸಾವು…!!!

Listen to this article

ಯಾದಗಿರಿ: ಯಾದಗಿರಿ  ನಗರ ಠಾಣೆಯಲ್ಲಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪರಶುರಾಮ (34) ಅವರು ಹೃದಯಾಘಾತದಿಂದ ನಿನ್ನೆ  ಸಾವಿಗೀಡಾಗಿದ್ದಾರೆ. ಇತ್ತೀಚೆಗೆ ಸೈಬರ್ ಕ್ರೈಮ್   ಪಿಎಸ್‌ಐ ಆಗಿ ವರ್ಗಾವಣೆಗೊಂಡಿದ್ದ ಪರಶುರಾಮ, ಮೊನ್ನೆಯಷ್ಟೇ ನಗರ ಠಾಣೆಯಲ್ಲಿ ಅಭಿಮಾನದ ಬೀಳ್ಕೊಡುಗೆ ಪಡೆದಿದ್ದರು.

ನಿನ್ನೆ ಪೊಲೀಸ್ ಕ್ವಾರ್ಟರ್ಸ್‌ ನಿವಾಸದಲ್ಲಿ ಹಠಾತ್ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.

ಈ ಸಾವು ಅನುಮಾನ ಮೂಡಿಸಿದ್ದು, ಕುಟುಂಬಸ್ಥರನ್ನು ಶಾಕ್‌ಗೆ ದೂಡಿದೆ. ಪರಶುರಾಮ್‌ ಅವರ ಪತ್ನಿ ಗರ್ಭಿಣಿಯಾಗಿದ್ದು ತವರಿಗೆ ತೆರಳಿದ್ದವರು ಮರಳಿದ್ದಾರೆ. ಸ್ಥಳೀಯ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಲಂಚದ ಹಣಕ್ಕಾಗಿ ಹೇರುತ್ತಿದ್ದ ಒತ್ತಡದಿಂದಲೇ ಪತಿಗೆ ಹೃದಯಾಘಾತ ಉಂಟಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸ್ಥಳೀಯ ದಲಿತ ಸಂಘಟನೆಗಳು ಶಾಸಕರ ವಿರುದ್ಧ ಪ್ರತಿಭಟನೆಗೆ ಮುಂದಾಗಿವೆ.

ಈ ಕುರಿತು ಪರಶುರಾಮ್‌ ಅವರ ಪತ್ನಿ ಶ್ವೇತಾ ದೂರು ನೀಡಿದ್ದಾರೆ. ಯಾದಗಿರಿ ನಗರ ಠಾಣೆಯಲ್ಲಿ ಉಳಿದುಕೊಳ್ಳಲು ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ಅವರು 30 ಲಕ್ಷ ರೂ. ಹಣ ಲಂಚ ನೀಡುವಂತೆ ಒತ್ತಾಯಿಸಿದ್ದರು. ಕಳೆದ ಏಳು ತಿಂಗಳ ಹಿಂದಷ್ಟೇ 30 ಲಕ್ಷ ರೂ. ಹಣ ನೀಡಿ ನಗರ ಠಾಣೆಗೆ ಪೋಸ್ಟಿಂಗ್ ಪಡೆದುಕೊಂಡಿದ್ದರು. ಇದರಿಂದ ಸಾಲದ ಸುಳಿಗೆ ಸಿಲುಕಿದ್ದರು. ಇದೀಗ ‌ಮತ್ತೆ ನಿಯಮಬಾಹಿರವಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಒಂದು ವರ್ಷ ಪೂರೈಸುವ ಮೊದಲೇ ವರ್ಗಾವಣೆ ಮಾಡಿದ್ದರಿಂದ ಒತ್ತಡಕ್ಕೆ ಒಳಗಾಗಿದ್ದರು ಎಂದು ಶ್ವೇತಾ ಆರೋಪಿಸಿದ್ದಾರೆ.

ನಿನ್ನೆಯಷ್ಟೇ ಸಚಿವ ಪ್ರಿಯಾಂಕ ಖರ್ಗೆ ಅವರೊಂದಿಗೂ ಪಿಎಸ್‌ಐ ಪರಶುರಾಮ್‌ ಫೋನ್‌ನಲ್ಲಿ ಮಾತಾಡಿದ್ದರು ಎಂದು ಪತ್ನಿ ಹೇಳಿದ್ದಾರೆ. ಸ್ಥಳಕ್ಕೆ ಶಾಸಕ ಬರುವಂತೆ ಪಿಎಸ್‌ಐ ಪತ್ನಿ ಪಟ್ಟು ಹಿಡಿದಿದ್ದು, ಅವರ ಗೋಳಾಟ ಕರುಳು ಚುರ್ ಎನ್ನುವಂತಿದೆ. ನನ್ನ ಗಂಡನ ಸಾವಿಗೆ‌ ನ್ಯಾಯ ಸಿಗಬೇಕು, ಶಾಸಕ ಎಲ್ಲಿ ಕರಿರಿ ಎಂದು ಪತ್ನಿ ಗೋಳಾಡಿದ್ದಾರೆ. ಮಧ್ಯರಾತ್ರಿಯೂ ನನ್ನ ಗಂಡ ಎಸ್ಪಿ‌ ಮೇಡಂ ಪೋನ್ ಹಚ್ಚಿದರು ಅಂತ ಓಡುತ್ತಿದ್ದರು. ಈ ಸಾವಿಗೆ ನನ್ನ ಗಂಡ ಏನು ಅನ್ಯಾಯ ಮಾಡಿದ್ದರು. ಎಂಎಲ್‌ಎ ಬರುವವರೆಗೂ ನಾನು ಇಲ್ಲಿಂದ ಹೋಗುವುದಿಲ್ಲ ಎಂದು ಯಾದಗಿರಿ ಎಸ್ಪಿ ಜಿ.‌ಸಂಗೀತಾ ಎದುರು ಪತ್ನಿ ಶ್ವೇತಾ ಕಣ್ಣೀರಿಟ್ಟಿದ್ದಾರೆ.

ಯಾದಗಿರಿ ಶಾಸಕ ಹಾಗೂ ಪುತ್ರನ ವಿರುದ್ಧ ದೂರು

ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು, ಅವರ ಪುತ್ರ ಪಂಪನಗೌಡ (ಸನ್ನಿಗೌಡ) ವಿರುದ್ಧ ದೂರು ಪಿಎಸ್‌ಐ ಪತ್ನಿ ಶ್ವೇತಾ ಯಾದಗಿರಿ ಎಸ್ಪಿ ಸಂಗೀತಾ ಅವರಿಗೆ ದೂರು ನೀಡಿದ್ದಾರೆ. ಪೋಸ್ಟಿಂಗ್‌ಗಾಗಿ ಪದೇ ಪದೆ ಹಣಕ್ಕೆ ಕಿರುಕುಳ ನೀಡುತ್ತಿದ್ದ ಆರೋಪ ದಾಖಲಿಸಲಾಗಿದೆ. ಶಾಸಕ, ಅವರ ಪುತ್ರ ಹಣಕ್ಕಾಗಿ ನಿರಂತರ ಕಿರುಕುಳ ನೀಡುತ್ತಿದ್ದ ಬಗ್ಗೆ ಪತ್ನಿಗೆ ಪರಶುರಾಮ ಹೇಳಿದ್ದರು. 30 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಜಾತಿ ನಿಂದನೆಯನ್ನೂ ಮಾಡಿದ್ದರು. ಶಾಸಕರ ಕಿರುಕುಳದಿಂದ ಪರಶುರಾಮ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಪತ್ನಿ ದೂರಿದ್ದಾರೆ.

ಶಾಸಕ, ಆತನ ಪುತ್ರನ‌ ಮೇಲೆ ಕೇಸ್ ದಾಖಲಿಸಿದ ಬಳಿಕ‌ ಮರಣೋತ್ತರ ಪರೀಕ್ಷೆಗೆ ಪತ್ನಿ ಒಪ್ಪಿಗೆ ಸೂಚಿಸಿದ್ದು, ಯಾದಗಿರಿ ಯಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ಪರಶುರಾಮ ಶವ ರವಾನೆಯಾಗಿದೆ.

ಪರಶುರಾಮ ಮಾವ ವೆಂಕಟಸ್ವಾಮಿ ಕೂಡ ಶಾಸಕರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಯಾದಗಿರಿ ಎಂಎಲ್‌ಗೆ ದುಡ್ಡಿನ ಆಸೆ ವಿಪರೀತವಾಗಿದೆ. ಅವಧಿ ಪೂರ್ವ ವರ್ಗಾವಣೆಯಿಂದ ಪರಶುರಾಮ ನೊಂದಿದ್ದರು. 7 ತಿಂಗಳ ಅವಧಿಯಲ್ಲಿ ಎಂಎಲ್‌ಎ ಬೇರೆಯವರನ್ನು ಪಿಎಸ್‌ಐ ಆಗಿ ಹಾಕಿಸಿದ್ದಾರೆ. ವರ್ಗಾವಣೆ ಆಗುತ್ತಿರುವುದು ಹೋಂ ಮಿನಿಸ್ಟರ್ ಹಾಗೂ ಸಿಎಂ ಗಮನಕ್ಕೆ ಬರುತ್ತಿಲ್ಲವೇ? ದಕ್ಷ ಅಧಿಕಾರಿಗಳು ಸಾಯುವುದಕ್ಕೆ ಇರುವುದೇ ಎಂದು ಅವರು ಪ್ರಶ್ನಿಸಿದ್ದಾರೆ.

ಸಂಘಟನೆಗಳಿಂದ ಪ್ರತಿಭಟನೆ

ಪಿಎಸ್‌ಐ ಪರಶುರಾಮ ಸಾವಿನ ಸುತ್ತ ಅನುಮಾನಗಳು ಮೂಡುತ್ತಿದ್ದು, ಯಾದಗಿರಿಯ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆದಿದೆ. ನಗರದ ಖಾಸಗಿ ಆಸ್ಪತ್ರೆ ಬಳಿ ಜಮಾಯಿಸಿದ ವಿವಿಧ ಸಂಘಟನೆಗಳ ಕಾರ್ಯಕರ್ತರು, ಆಂಬ್ಯುಲೆನ್ಸ್ ತಡೆದು ಪ್ರತಿಭಟಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಶವ ರವಾನೆ ಮಾಡುತ್ತಿದ್ದಾಗ ಆಂಬ್ಯುಲೆನ್ಸ್‌ ಅಡ್ಡಗಟ್ಟಿ ಕುಳಿತ ಸಂಘಟನೆಗಳ ಕಾರ್ಯಕರ್ತರು, ಸಾವಿನ ಬಗ್ಗೆ ಸೂಕ್ತ ತನಿಖೆ ಆಗಬೇಕೆಂದು ಆಗ್ರಹಿಸಿದ್ದಾರೆ ಮತ್ತು ಮೃತ ಅಧಿಕಾರಿ ಕುಟುಂಬಕ್ಕೆ ಸೂಕ್ತ ನ್ಯಾಯ ದೊರಕಿಸಿಕೊಡಬೇಕು ಎಂಬ ಬಿಗಿಪಟ್ಟು ಹಿಡಿದರು…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend