ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಯುವಕರು ಶ್ರಮ ವಹಿಸಬೇಕು : ಮಂಜುನಾಥ ನಾಯಕ್
ಮಾನವಿ : ಪ್ರಸ್ತುತ ದಿನಮಾನಗಳಲ್ಲಿ ಕನ್ನಡ ಭಾಷೆಯ ಬಳಕೆ ಕಡಿಮೆಯಾಗುತ್ತಿದ್ದು, ಸಮಾಜವನ್ನು ಪ್ರತಿನಿಧಿಸುವ ಮಾಧ್ಯಮಗಳಲ್ಲಿಯೂ ಶುದ್ಧ ಕನ್ನಡ ಭಾಷೆಯನ್ನು ಬಳಕೆ ಕಡಿಮೆಯಾಗುತ್ತಿರುವುದು ವಿಷಾದನೀಯ ಎಂದು ಸಮಾಜದಲ್ಲಿ ತನ್ನದೇ ಆದ ಸೇವೆಯನ್ನು ಮಾಡುತ್ತಿರುವ ಮಂಜುನಾಥ ನಾಯಕ್ ಕಳವಳ ವ್ಯಕ್ತಪಡಿಸಿದರು. ಇಂದಿನ ದಿನಗಳಲ್ಲಿ ಕನ್ನಡ ಭಾಷೆ ಶುದ್ಧತೆ ಕಳೆದುಕೊಳ್ಳುತ್ತಿದೆ. ಗ್ರಾಮೀಣ ಭಾಗದಿಂದ ಹಿಡಿದು ನಮ್ಮ ಭಾಷೆ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದೆ. ಹೀಗೆ ಮುಂದುವರಿದಲ್ಲಿ ನಮ್ಮ ಭಾಷೆ ತನ್ನತನವನ್ನು ಉಳಿಸಿಕೊಳ್ಳುವುದು ಕಷ್ಟವಾಗುತ್ತದೆ. ಈಗಿನಿಂದಲೇ ಈ ಕುರಿತು ನಾವೆಲ್ಲರೂ ಎಚ್ಚರವಾಗಿರಬೇಕು. ನಮ್ಮ ಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಶ್ರಮವಹಿಸಬೇಕು. ರಾಜ್ಯೋತ್ಸವ ಆಚರಣೆ ಆಶಯ ಕೂಡ ಅದೇ ಆಗಿದೆ ಎಂದರು. ಕನ್ನಡ ಭಾಷೆ ಬಳಕೆಯ ಕುರಿತು ಒಂದು ಸಂಶೋಧನೆ ನಡೆದಿದ್ದು, ಕಳೆದ 30 ವರ್ಷಗಳಲ್ಲಿ ನಗರಗಳಲ್ಲಿ ಕನ್ನಡ ಭಾಷೆ ಬಳಕೆ ಹೆಚ್ಚಾಗಿದ್ದು, ಗ್ರಾಮೀಣ ಭಾಗದಲ್ಲಿ ಕಡಿಮೆಯಾಗುತ್ತಾ ಬರುತ್ತಿದೆ. ಮಾಧ್ಯಮದಲ್ಲಿಯೂ ಕನ್ನಡಕ್ಕಿಂತ ಹೆಚ್ಚಾಗಿ ಕಂಗ್ಲಿಷ್ ಭಾಷೆ ಹೆಚ್ಚಾಗಿ ಬಳಕೆಯಾಗುತ್ತಿದೆ. ಮಾಧ್ಯಮಗಳು ಒಂದು ಕಾಲದಲ್ಲಿ ನಮ್ಮ ಭಾಷೆಯನ್ನು ಉಳಿಸಿಕೊಳ್ಳುವಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಒಂದು ಸಮಯದಲ್ಲಿ ರೇಡಿಯೋ ಬದಲಾಗಿ ಆಕಾಶವಾಣಿ ಎಂದು ಹೆಸರನ್ನು ಮರುನಾಮಕರಣ ಮಾಡಲು ಮಾಧ್ಯಮಗಳೇ ಕಾರಣ. ಇಂತಹ ಮಾಧ್ಯಮಗಳು ಇಂದು ಕಂಗ್ಲಿಷ್ ಭಾಷೆ ಬೆನ್ನು ಹತ್ತಿದ್ದು, ಎಲ್ಲೋ ಅದು ನಮ್ಮ ಭಾಷೆಗೆ ಮಾರಕವಾಗುತ್ತಿದೆಯೇ ಎಂಬ ಪ್ರಶ್ನೆ ಮೂಡುವುದು ಸಹಜ. ಇದರ ನಡುವೆಯೂ ಕನ್ನಡ ಭಾಷೆ ತಂತ್ರಜ್ಞಾನವನ್ನು ಮೈಗೂಡಿಸಿಕೊಳ್ಳುವಲ್ಲಿ ಅತ್ಯಂತ ಕ್ಷಿಪ್ರವಾಗಿ ಎಲ್ಲ ಭಾಷೆಗಳಿಗಿಂತ ಮುಂದೆ ಇದೆ ಎಂಬುವುದು ಸಂತಸದ ವಿಷಯ. ಹೀಗಾಗಿ ನಮ್ಮ ಭಾಷೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
ಅದನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗಳಿಗೆ ರವಾನಿಸಬೇಕಾದ
ಒಂದು ಪ್ರಾಮಾಣಿಕ ಕರ್ತವ್ಯ ನಮ್ಮ ಮೇಲಿದ್ದು ಇಂದಿನ ಪೀಳಿಗೆಯ ಯುವಕರು ಅನುಸರಿಸಬೇಕೆಂದು ಮಂಜುನಾಥ ನಾಯಕ್ ಹೇಳಿದರು…
ವರದಿ, ಲಿಂಗರಾಜ್ ತಡಕಲ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030