ಬರ ನಿರ್ವಹಣೆ; ಮಳೆಗಾಲ ಸಿದ್ಧತೆ ಕುರಿತು ಸಭೆ ಎಚ್ಚರಿಕೆ ವಹಿಸಲು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸೂಚನೆ…!!!

Listen to this article

ಬರ ನಿರ್ವಹಣೆ; ಮಳೆಗಾಲ ಸಿದ್ಧತೆ ಕುರಿತು ಸಭೆ

ಕುಡಿಯುವ ನೀರು, ಮೇವು, ಬೀಜ-ಗೊಬ್ಬರ ಕೊರತೆ ಆಗದಂತೆ ಎಚ್ಚರಿಕೆ ವಹಿಸಲು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸೂಚನೆ

ಬೆಳಗಾವಿ, : ಬೇಸಿಗೆ ಹಿನ್ನೆಲೆಯಲ್ಲಿ ಸದ್ಯಕ್ಕೆ ಬರಗಾಲದ ಪರಿಸ್ಥಿತಿ ಇದ್ದರೂ ಈ ಬಾರಿ ಉತ್ತಮ‌ ಮಳೆಯ ಮುನ್ಸೂಚನೆ ಇರುವುದರಿಂದ ರೈತರಿಗೆ ಸಕಾಲಕ್ಕೆ ಬೀಜ-ಗೊಬ್ಬರ ಪೂರೈಸಲು ಸಿದ್ಧತೆ ಮಾಡಿಕೊಳ್ಳಬೇಕು. ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ನಡೆದ ಬರ ನಿರ್ವಹಣೆ ಹಾಗೂ ಮಳೆಗಾಲ ಪೂರ್ವಭಾವಿ ಸಿದ್ಧತೆ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.

ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ಕ್ರಮ ಕೈಗೊಳ್ಳಬೇಕು. ಈ ಬಾರಿ ಉತ್ತಮ‌ ಮಳೆಯಾಗುವ ನಿರೀಕ್ಷೆ ಇರುವುದರಿಂದ ನೀರು ಸರಾಗವಾಗಿ ಹರಿದು ಹೋಗಲು ಅನುಕೂಲವಾಗುವಂತೆ ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಇರುವ ನಾಲಾ-ಹಳ್ಳಗಳ ಸುತ್ತಮುತ್ತಲೂ ಸ್ವಚ್ಛತೆ ಮಾಡಬೇಕು.

ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳ ಜಂಟಿ ಸಭೆ ನಡೆಸಿ ನಗರದಲ್ಲಿ ಮಳೆಗಾಲ ಪರಿಸ್ಥಿತಿ ಸಮರ್ಪಕ‌ ನಿರ್ವಹಣೆಗೆ ಯೋಜನೆ ರೂಪಿಸಬೇಕು ಎಂದರು.

ನಕಲಿ ಬೀಜ-ಗೊಬ್ಬರ; ಎಚ್ಚರ ವಹಿಸಲು ಸೂಚನೆ:

ಮಳೆ ಆರಂಭಗೊಂಡ‌ ಬಳಿಕ ರೈತರಿಗೆ ನಕಲಿ ಬೀಜ ಅಥವಾ ಗೊಬ್ಬರ ಪೂರೈಕೆಯ ಬಗ್ಗೆ ದೂರುಗಳಿದ್ದರೆ ಅಂತಹ ಪ್ರಕರಣಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಸಚಿವ ಜಾರಕಿಹೊಳಿ ತಿಳಿಸಿದರು.

ಮನೆಹಾನಿ ಪರಿಹಾರ; ಸಮರ್ಪಕ ಸಮೀಕ್ಷೆಗೆ ಸಲಹೆ:

ಮನೆಹಾನಿ ಪರಿಹಾರ ನೀಡುವಾಗ 2019 ರಲ್ಲಿ ಕೆಲವು ನ್ಯೂನ್ಯತೆಗಳು ಕಂಡುಬಂದಿರುತ್ತವೆ.
ಜಾನುವಾರುಗಳ ಕೊಟ್ಟಿಗೆಗಳು ಮನೆಯ ಪ್ರವೇಶ ದ್ವಾರದ ಬಳಿ ಇರುತ್ತವೆ. ಇದಲ್ಲದೇ ಮಳೆ ಜೋರಾದಾಗ ಜನರು ಮುಂಜಾಗ್ರತಾ ಕ್ರಮವಾಗಿ ಮನೆಗಳನ್ನು ತೆರವುಗೊಳಿಸಿ ಬೇರೆ ಕಡೆ ವಾಸವಿರುತ್ತಾರೆ. ಅಂತಹ ಮನೆಗಳು ಬಿದ್ದ ಸಂದರ್ಭದಲ್ಲಿ ಪರಿಹಾರ ಸಿಕ್ಕಿರುವುದಿಲ್ಲ‌. ಈ ಬಾರಿ ಇಂತಹ ಅಂಶಗಳನ್ನು ಗಮನಿಸಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಸೂಚನೆ ನೀಡಿದರು.

ಬೆಳಗಾವಿ ಸೇರಿದಂತೆ ನಗರ ಪ್ರದೇಶಗಳಲ್ಲಿ ಬೀದಿನಾಯಿಗಳ ಹಾವಳಿ ಹಾಗೂ‌ ನಾಯಿಕಡಿತದ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದ್ದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಬರಗಾಲದಿಂದ ಬೆಳೆಹಾನಿ 316 ಕೋಟಿ ಪರಿಹಾರ ಬಿಡುಗಡೆ:

ಜಿಲ್ಲೆಯಲ್ಲಿ 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬರಗಾಲದಿಂದ ಬೆಳೆಹಾನಿಗಿದ್ದರಿಂದ 3,74,066 ರೈತರಿಗೆ ಒಟ್ಟಾರೆ 316 ಕೋಟಿ ರೂಪಾಯಿ ಬೆಳೆಹಾನಿ ಪರಿಹಾರ ನೀಡಲಾಗಿದೆ.
ಆಧಾರ್ ಸೀಡಿಂಗ್, ಖಾತೆ ಸ್ಥಗಿತ ಸೇರಿದಂತೆ 23 ರೈತರಿಗೆ ಮಾತ್ರ ಪರಿಹಾರ ಜಮೆ ಮಾಡುವುದು ಸಾಧ್ಯವಾಗಿರುವುದಿಲ್ಲ. ಈ ಬಗ್ಗೆ ರೈತರಿಗೆ ತಿಳಿವಳಿಕೆ ನೀಡಿ ತಾಂತ್ರಿಕ ಸಮಸ್ಯೆ ಸರಿಪಡಿಸಲಾಗುತ್ತಿದೆ. ಉಳಿದ ರೈತರಿಗೂ ಪರಿಹಾರ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಕೆಲವು ಕಡೆಗಳಲ್ಲಿ ಪಾಳು ಜಮೀನಿನಲ್ಲಿ ಬಿತ್ತನೆ ಆಗದಿರುವುದರಿಂದ ಅಂತಹ ಜಮೀನುಗಳಿಗೆ ಸಂಬಂಧಿಸಿದ ಪರಿಹಾರ ನೀಡಲಾಗಿರುವುದಿಲ್ಲ.
105 ಗ್ರಾಮಗಳಲ್ಲಿ ಪ್ರತಿದಿನ 630 ಟ್ಯಾಂಕರ್ ಟ್ರಿಪ್ ಗಳ ಮೂಲಕ ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತಿದೆ‌. ಉಳಿದ ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿಲ್ಲ.


ವಿವಿಧೆಡೆ ಸ್ಥಾಪಿಸಲಾಗಿರುವ ಮೇವು ಬ್ಯಾಂಕುಗಳ ಮೂಲಕ 580 ಟನ್ ಮೇವು ಕೂಡ ಪೂರೈಸಲಾಗಿರುತ್ತದೆ.
ಮಹಾರಾಷ್ಟ್ರದ ಜಲಾಶಯಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹವಿರುತ್ತದೆ. ಮಳೆಗಾಲ ಆರಂಭಕ್ಕೂ ಮುನ್ನ ನೀರು ಬಿಡುಗಡೆ ಮಾಡಿದರೆ ಅನುಕೂಲವಾಗಲಿದೆ.
ಬರಗಾಲ ನಿರ್ವಹಣೆಗೆ 35 ಕೋಟಿ ರೂಪಾಯಿ ಲಭ್ಯವಿರುತ್ತದೆ. ಹಣಕಾಸಿನ ತೊಂದರೆಯಿಲ್ಲ. ಮಳೆಗಾಲದ ಹಿನ್ನೆಲೆಯಲ್ಲಿ ಕೆರೆಗಳ ಹೂಳೆತ್ತಲು ಟೆಂಡರ್ ಕರೆಯಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ವಿವರಿಸಿದರು.

ಕೃಷಿ ಇಲಾಖೆಯ‌ ಜಂಟಿ ನಿರ್ದೇಶಕರಾದ ಶಿವನಗೌಡ‌ ಪಾಟೀಲ ಅವರು, ಬೀಜ-ಗೊಬ್ಬರಗಳ ದಾಸ್ತಾನು ಕುರಿತು ಸಭೆಯಲ್ಲಿ ವಿವರಿಸಿದರು.

ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ, ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರಾದ ಪಿ.ಎನ್.ಲೋಕೇಶ್, ಸೇರಿದಂತೆ ಜಿಲ್ಲಾ ಪಂಚಾಯತಿ, ಪಶುಪಾಲನೆ ಇಲಾಖೆ, ನಗರ ನೀರು‌ ಸರಬರಾಜು ಮಂಡಳಿ, ಗ್ರಾಮೀಣ ಕುಡಿಯುವ ನೀರು, ಕೆಯುಐಡಿಎಫ್ ಸಿ ಮತ್ತಿತರ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು…

ವರದಿ. ಮಹಾಲಿಂಗ ಗಗ್ಗರಿ, ಬೆಳಗಾವಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend