ಯೋಧನ ಸಾವು : ದುಃಖದಲ್ಲಿ ಮುಳುಗಿದ ಕಟಗೇರಿ ಗ್ರಾಮ…!!!

Listen to this article

ಯೋಧನ ಸಾವು : ದುಃಖದಲ್ಲಿ ಮುಳುಗಿದ ಕಟಗೇರಿ ಗ್ರಾಮ
ಪಂಚಭೂತಗಳಲ್ಲಿ ಲೀನನಾದ ಯೋಧ ಉಮೇಶ ಡಬಗಲ್ಲ
ಗುಳೇದಗುಡ್ಡ : ಭಾರತೀಯ ಸೇನೆಯ ಬಿಎಸ್‍ಎಫ್ 05 ಬಟಾಲಿಯನ್‍ನಲ್ಲಿ ಯೋಧನಾಗಿ ಕಳೆದ 13 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಕಟಗೇರಿ ಗ್ರಾಮದ ಸೈನಿಕ ಉಮೇಶ ಅಖಂಡಪ್ಪ ಡಬಗಲ್ಲ (33) ನಿಧನ ಹೊಂದಿದ್ದು, ಯೋಧನ ಪಾರ್ಥಿವ ಶರೀರ ಶುಕ್ರವಾರ ಸ್ವಗ್ರಾಮಕ್ಕೆ ಆಗಮಿಸುತ್ತಿದಂತೆ ಇಡೀ ಗ್ರಾಮವೇ ದುಃಖದದಲ್ಲಿ ಮುಳುಗಿತು. ಕಟಗೇರಿ ಗ್ರಾಮದ ಗ್ರಾಮಪಂಚಾಯತಿಯ ಪಕ್ಕದ ಎಪಿಎಂಸಿ ಆವರಣದಲ್ಲಿ ಯೋಧನ ಅಂತ್ಯಕ್ರಿಯೆಯನ್ನು ಸಕಲ ಸರಕಾರಿ ಗೌರವದೊಂದಿಗೆ ನೇರವೇರಿಸಲಾಯಿತು. ಯೋಧನ ಗೌರವಾರ್ಥವಾಗಿ ಪೋಲಿಸ್ ಇಲಾಖೆಯವರು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದರು.


ಯೋಧ ಉಮೇಶ ಡಬಗಲ್ಲ ಅವರ ಪಾರ್ಥಿವ ಶರೀರ ಶುಕ್ರವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಕಟಗೇರಿ ಹಾಗೂ ಸುತ್ತಮುತ್ತಲ ಗ್ರಾಮಗಳ ನೂರಾರು ಗ್ರಾಮಸ್ಥರು, ವಿದ್ಯಾರ್ಥಿಗಳು, ನಿವೃತ್ತ ಸೈನಿಕರು ಆಗಮಿಸಿ, ಮಡಿದ ಯೋಧನಿಗೆ ನಮನ ಸಲ್ಲಿಸಿ ಉಮೇಶ ಅಮರರಹೇ…. ಭಾರತಮಾತಾಕೀ ಜೈ ಎಂದು ಘೋಷಣೆಗಳು ಮೊಳಗಿಸಿದರು.
ಕುಟುಂಬದ ಆಕ್ರಂದನ: ಯೋಧ ಉಮೇಶ ಅವರ ಮೃತಪಟ್ಟಿರುವ ಸುದ್ದಿ ತಿಳಿದ ಎರಡು ದಿನಗಳಿಂದ ಯೋಧನ ಕುಟುಂಬ ಕಣ್ಣೀರನಲ್ಲಿ ಮುಳಗಿತ್ತು. ಶುಕ್ರವಾರ ಯೋಧನ ಪಾರ್ಥಿವ ಶರೀರ ಮನೆಗೆ ಆಗಮಿಸುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಬಂಧುಬಳಗದವರು, ಗ್ರಾಮಸ್ಥರು ಸೇರಿದಂತೆ ಅಪಾರ ಜನಸ್ಥೋಮ ದುಃಖದ ಮಡುವಿನಲ್ಲಿದ್ದರು.
ಸಾಂತ್ವನ ಹೇಳಿದ ಡಿಸಿ: ಜಿಲ್ಲಾಧಿಕಾರಿ ಕೆ.ಎಂ. ಜಾನಕಿ ಅವರು ಉಮೇಶ ಅವರ ಪತ್ನಿ, ತಂದೆ, ತಾಯಿಗೆ ಸ್ವಾಂತನ ಹೇಳಿ, ಯೋಧ ಉಮೇಶ ಅವರು ದೇಶರಕ್ಷಣೆಗೆ ತಮ್ಮ ಪ್ರಾಣವನ್ನು ಮುಡುಪಿಟ್ಟಿದ್ದರು. ಅವರ ಅಗಲಿಕೆಯಿಂದ ನಮಗೆ ದುಃಖ ತಂದಿದೆ. ಆ ದೇವರು ನಿಮಗೆ ದುಃಖ ಭರಿಸುವ ಶಕ್ತಿ ನೀಡಲಿ. ಇಡೀ ಜಿಲ್ಲಾಡಳಿತ ನಿಮ್ಮೊಂದಿಗಿದೆ ಎಂದು ಸ್ವಾಂತನ ಹೇಳಿ ಅಗಲಿದ ಯೋಧನಿಗೆ ಗೌರವ ಸಲ್ಲಿಸಿದರು.
13 ವರ್ಷ ದೇಶ ಸೇವೆ : ಕಟಗೇರಿಯ ಗ್ರಾಮದ ಬಿಎಸ್‍ಎಫ್ ಯೋಧ ಉಮೇಶ ಡಬಗಲ್ಲ ಅವರು 13 ವರ್ಷಗಳಲ್ಲಿ ಆಸ್ಸಾಂ, ಗುಜರಾತ, ಪಂಜಾಬ, ಜಮ್ಮುಕಾಶ್ಮೀರ ಸೇವೆಸಲ್ಲಿಸಿದ್ದು ಈಗ ಪ್ರಸ್ತುತ ಪಶ್ಚಿಮಬಂಗಾಳದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇವರ ಸೇವಾವಧಿ ಇನ್ನೂ 7 ವರ್ಷ ಬಾಕಿ ಇತ್ತು. ಯೋಧ ಉಮೇಶ ಕಳೆದ ಬಸವಜಯಂತಿಯಂದು ನಡೆಯವುವ ಗ್ರಾಮದ ಜಾತ್ರೆಗೆ ಬಂದು ಹೋಗಿದ್ದ. ತಂದೆ ಅಖಂಡಪ್ಪ ಅವರಿಗೆ ಮೂರು ಜನ ಮಕ್ಕಳಲ್ಲಿ ಎರಡನೇಯವರಾದ ಯೋಧ ಉಮೇಶ, ಬಿಎಸ್‍ಎಫ್‍ಗೆ ಸೇರಿ ದೇಶಸೇವೆಯಲ್ಲಿ ತೊಡಗಿಕೊಂಡಿದ್ದ. ನಾಲ್ಕುವರ್ಷದ ಪುತ್ರ ಕುಶಾಲ, ಪತ್ನಿ ದೀಪಾ, ತಂದೆ, ತಾಯಿ, ಸಹೋದರರು ಹಾಗೂ ಅಪಾರ ಬಂಧುಬಳಗ ಅಗಲಿದ್ದು, ಇಡೀ ಗ್ರಾಮ ಶೋಕಸಾಗರದಲ್ಲಿ ಮುಳುಗಿತ್ತು.
ಪಂಚಭೂತಗಳಲ್ಲಿ ವಿಲೀನ: ಯೋಧನ ಪಾರ್ಥಿವ ಶರೀರ ಮನೆಯ ಬಳಿ ಆಗಮಿಸಿತು, ಬಳಿಕ ಗ್ರಾಮದ ಮಹಾಧ್ವಾರದ ಮೂಲಕ ಮೆರವಣಿಗೆಯ ಮೂಲಕ ಹಾಯ್ದು ಗ್ರಾಮದ ಸಭಾಭವನದಲ್ಲಿ ಸಾರ್ವಜನಿಕರಿಗೆ ಅಂತಿಮ ನಮನ ಸಲ್ಲಿಸಲು ಇರಿಸಲಾಯಿತು. ಸಂಜೆ ನಾಲ್ಕುವರೆ ಗಂಟೆಗೆ ಯೋಧನ ಅಂತ್ಯಸಂಸ್ಕಾರ ಮಾಡಲಾಯಿತು.
ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿ ಪ್ರಸನ್ನಕುಮಾರ ದೇಸಾಯಿ, ಬಿಎಸ್‍ಎಫ್ ಬಟಾಲಿಯನ್‍ನ ಸಬ್ ಇನ್ಸ್‍ಪೆಕ್ಟರ್ ಸಂತೋಷ ವಾಘ, ಪುಷ್ಪೇಂದ್ರ ಸಿಂಗ್, ತಹಸೀಲ್ದಾರ ಮಂಗಳಾ ಎಂ, ಡಿವೈಎಪಿ ವಿಶ್ವನಾಥ ಕುಲಕರ್ಣಿ, ಮಾಜಿ ಶಾಸಕ ರಾಜಶೇಖರ ಶೀಲವಂತ, ರತ್ನಮ್ಮ ಚಿಮ್ಮನಕಟ್ಟಿ, ಸಿಪಿಐ ಕರಿಯಪ್ಪ ಬನ್ನೆ, ಪಿಡಿಓ ರಾಮಚಂದ್ರ ಮೇತ್ರಿ, ಕಂದಾಯ ನಿರೀಕ್ಷಕ ಎಸ್.ಎಸ್. ಜೋಗಿನ, ಪಿಎಸ್‍ಐ ರಾಜು ಬೀಳಗಿ, ಗ್ರಾಪಂ ಅಧ್ಯಕ್ಷ ಸುಮಿತ್ರಾ ದ್ಯಾವನ್ನವರ, ಉಪಾಧ್ಯಕ್ಷ ರಾಮಚಂದ್ರ ಡೋಣಿ, ಸದಸ್ಯರಾದ ಉಮೇಶ ಮೊಖಾಶಿ, ಬಿ.ಜಿ.ಪೂಜಾರ, ಟಿ,ಎಸ್. ಮುಖಾಶಿ, ಬಿ.ಎಸ್. ಹದ್ಲಿ, ಪಿ.ಕೆ. ಪಾಟೀಲ, ಡಿ.ಕೆ. ಮೇಟಿ, ಎಸ್.ಜಿ.ಶಿವಪ್ಪಯ್ಯನಮಠ, ಮಾಜಿ ಸೈನಿಕರ ಸಂಘದ ತಾಲೂಕು ಅಧ್ಯಕ್ಷ ಸುಭಾಷ ಕೋಟಿ, ವಿ.ಎಸ್. ಹಿರೇಮಠ ಸೇರಿದಂತೆ ಕಟಗೇರಿ ಹಾಗೂ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು, ಮಾಜಿ ಸೈನಿಕರು, ಭಾಗವಹಿಸಿದ್ದರು.


ಯೋಧನ ಅಗಲಿಕೆ ನೋವು ತಂದಿದೆ: ನಮ್ಮ ಮತಕ್ಷೇತ್ರದ ಯೋಧ ಉಮೇಶ ಡಬಗಲ್ಲ ಅವರು ಕಳೆದ 13 ವರ್ಷಗಳಿಂದ ನಮ್ಮ ದೇಶದ ಗಡಿಯನ್ನು ಕಾಯುವುದರ ಜೊತೆಗೆ ನಮ್ಮನ್ನು ಸುರಕ್ಷಿತವಾಗಿಡುವ ಕೆಲಸ ಮಾಡಿದ್ದಾರೆ. ಅವರು ನಮ್ಮನ್ನು ಅಗಲಿದ್ದು ನೋವಿನ ವಿಷಯ, ಅಗಲಿದ ಯೋಧನ ಕುಟುಂಬಕ್ಕೆ ಅವರ ಅಗಲಿಕೆಯನ್ನು ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ಬೇಡಿಕೊಳ್ಳುತ್ತೇನೆ. ಯೋಧನ ಕುಟುಂಬದೊಂದಗೆ ನಾವು ಯಾವಗಲು ಇರುತ್ತೇವೆ.- ಮಾಜಿ ಸಚಿವ ಬಿ.ಬಿ. ಚಿಮ್ಮನಕಟ್ಟಿ
ನಮಗೆ ಬಂದ ಮಾಹಿತಿ ಪ್ರಕಾರ ಯೋಧ ಉಮೇಶ ಅವರು ಪೈರಿಂಗ್ ಸಂದರ್ಭದಲ್ಲಿ ಮಿಸ್‍ಫೈರಿಂಗ್ ಗುಂಡು ತಗಲಿ ಸಾವನ್ನಪ್ಪಿದ್ದಾರೆ. ಅವರ ತ್ಯಾಗವನ್ನು ಈ ದೇಶ ಎಂದೂ ಮರೆಯುವುದಿಲ್ಲ. ಪ್ರತಿಯೊಬ್ಬರ ಮನಸ್ಸಿನಲ್ಲೂ ಉಮೇಶ ಅವರು ಇರುತ್ತಾರೆ. – ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ
ಪ್ರತಿ ದಿನ ನನ್ನ ಪತಿ ಉಮೇಶ ಡ್ಯೋಟಿಗೆ ಹೋಗುವ ಮುಂಚೆ ಫೋನ್ ಮಾಡಿ ನನ್ನ ಹಾಗೂ ಮನೆಯವರ ಯೋಗಕ್ಷೇಮ ವಿಚಾರಿಸುತ್ತಿದ್ದ. ಮಗನಿಗೆ ತಪ್ಪದೇ ಶಾಲೆಗೆ ಕಳುಹಿಸುವಂತೆ ಹೇಳುತ್ತಿದ್ದ. ಬುಧವಾರ ಫೋನ್ ಮಾಡಿದ್ದೇ ಕೊನೆಯಾಯಿತು – ಯೋಧನ ಪತ್ನಿ ದೀಪಾ ಡಬಗಲ್ಲ

ಭಾರತೀಯ ಸೇನೆಯ ಬಿಎಸ್‍ಎಫ್ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದ ಕಟಗೇರಿ ಗ್ರಾಮದ ಸೈನಿಕ ಉಮೇಶ ಡಬಗಲ್ಲ ಅವರ ಪಾರ್ಥೀವ ಶರೀರದ ಮೆರವಣಿಗೆ ಕಟಗೇರಿ ಗ್ರಾಮದಲ್ಲಿ ನಡೆಯಿತು.
9ಜಿಎಲ್‍ಡಿ -2ಬಿ ಫೊಟೋ: ಯೋಧ ಉಮೇಶ ಡಬಗಲ್ಲ ಅವರ ಪಾರ್ಥಿವ ಶರೀರದ ಮುಂದೆ ಕುಟುಂಬದ ಸದಸ್ಯರ ಆಕ್ರಂದನ
ಬಿಎಸ್‍ಎಫ್ ಬಟಾಲಿಯನ್‍ನ ಸಬ್ ಇನ್ಸ್‍ಪೆಕ್ಟರ್ ಸಂತೋಷ ವಾಘ, ಕುಟುಂಬಕ್ಕೆ ರಾಷ್ಟ್ರಧ್ವಜವನ್ನು ಹಸ್ತಾಂತರಿಸಿದರು.


ಜಿಲ್ಲಾಧಿಕಾರಿ ಕೆ.ಎಂ. ಜಾನಕಿ, ಎಸ್‍ಪಿ ಅಮರನಾಥ ರೆಡ್ಡಿ ಯೋಧನ ಕುಟುಂಬಕ್ಕೆ ಸಾಂತ್ವನ ಹೇಳಿದರು…

ವರದಿ. ಸಚಿನ್ ಬಾಗಲಕೋಟ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend