ಡೆಂಗ್ಯೂ ಮುಕ್ತ ಜಿಲ್ಲೆಗೆ ನಮ್ಮ ಆದ್ಯತೆ; ಅಧಿಕಾರಿಗಳು ಸಕ್ರಿಯವಾಗಲಿ; ಸಾರ್ವಜನಿಕರು ಸಹಕಾರ ನೀಡಲಿ…!!!

Listen to this article

ಡೆಂಗ್ಯೂ ಮುಕ್ತ ಜಿಲ್ಲೆಗೆ ನಮ್ಮ ಆದ್ಯತೆ;
ಅಧಿಕಾರಿಗಳು ಸಕ್ರಿಯವಾಗಲಿ; ಸಾರ್ವಜನಿಕರು ಸಹಕಾರ ನೀಡಲಿ;
ಅಭಿಯಾನ ಯಶಸ್ವಿಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಮನವಿ.

ಧಾರವಾಡ : ಧಾರವಾಡ ಜಿಲ್ಲೆಯನ್ನು ಡೆಂಗ್ಯೂ ಮುಕ್ತ ಜಿಲ್ಲೆಯನ್ನಾಗಿಸಲು ಜಿಲ್ಲಾಡಳಿತ ಪಣತೊಟ್ಟಿದ್ದು, ಆರೋಗ್ಯ ಇಲಾಖೆ ಹಾಗೂ ನೋಡಲ್ ಅಧಿಕಾರಿಗಳು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಸಾರ್ವಜನಿಕರು ಸಹಕಾರ ನೀಡಬೇಕು. ಡೆಂಗ್ಯೂ ಜನಜಾಗೃತಿ ಮತ್ತು ಡೆಂಗ್ಯೂ ಮುಕ್ತ ಜಿಲ್ಲೆ ಅಭಿಯಾನಕ್ಕೆ ಎಲ್ಲರೂ ಕೈ ಜೋಡಿಸಿ, ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮನವಿ ಮಾಡಿದರು.

ಅವರು ಇಂದು ಬೆಳಿಗ್ಗೆ ನಗರದ ನಿವೇದಿತಾ ಆದರ್ಶ ವಿದ್ಯಾಲಯ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಡೆಂಗ್ಯೂ ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.

ಜಿಲ್ಲೆಯ ಶಾಸಕರ, ಸಚಿವರ ಮತ್ತು ಕೇಂದ್ರ ಮಂತ್ರಿಗಳ ಮಾರ್ಗದರ್ಶನದಲ್ಲಿ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಧಾರವಾಡ ಜಿಲ್ಲೆಯಾದ್ಯಂತ 1,748 ಶಾಲಾ ಕಾಲೇಜುಗಳಲ್ಲಿ ಏಕಕಾಲಕ್ಕೆ ಡೆಂಗ್ಯೂ ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕುಂದಗೋಳ, ಹುಬ್ಬಳ್ಳಿ, ನವಲಗುಂದ ತಾಲೂಕುಗಳಲ್ಲಿ ಸ್ವತಃ ಶಾಸಕರು ಭಾಗವಹಿಸಿ, ಕಾರ್ಯಕ್ರಮ ಪ್ರೋತ್ಸಾಹಿಸಿದ್ದಾರೆ.

ನಗರ ಮತ್ತು ಗ್ರಾಮಗಳ ಮಟ್ಟದಲ್ಲಿ ಜರುಗಿದ ಡೆಂಗ್ಯೂ ಜನಜಾಗೃತಿ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳೊಂದಿಗೆ ವಿವಿಧ ಹಂತದ ಜನಪ್ರತಿನಿಧಿಗಳು, ಎಸ್.ಡಿ.ಎಂ.ಸಿ ಸದಸ್ಯರು, ಶಿಕ್ಷಕರು, ಸಿಬ್ಬಂದಿಗಳು ಭಾಗವಹಿಸಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಅಪಾರ ಸಂಖ್ಯೆಯ ವಿದ್ಯಾರ್ಥಿಗಳು, ಶಿಕ್ಷಕರು, ಸಾರ್ವಜನಿಕರು ಭಾಗಿ:ಜಿಲ್ಲೆಯಲ್ಲಿ ಏಕಕಾಲಕ್ಕೆ 1,748 ವಿದ್ಯಾಸಂಸ್ಥೆಗಳಲ್ಲಿ ಡೆಂಗ್ಯೂ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. 1,513 ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸುಮಾರು 2,50,000 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಮತ್ತು 7,586 ಶಿಕ್ಷಕರು, ಸಿಬ್ಬಂದಿಗಳು ಭಾಗವಹಿಸಿ, ಪ್ರಯೋಜನ ಪಡೆದಿದ್ದಾರೆ. 169 ಪದವಿ ಪೂರ್ವ ಕಾಲೇಜುಗಳ ಸುಮಾರು 41,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು, 3,200 ಕ್ಕೂ ಹೆಚ್ಚು ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು, ಸಿಬ್ಬಂದಿಗಳು ಡೆಂಗ್ಯೂ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಸರಕಾರಿ ಮತ್ತು ಅನುದಾನಿತ ಸುಮಾರು 36 ಪದವಿ ಕಾಲೇಜುಗಳ ಪೈಕಿ 6,500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು 520 ಕ್ಕೂ ಹೆಚ್ಚು ಪ್ರಾಧ್ಯಾಪಕರು, ಸಿಬ್ಬಂದಿಗಳು ಡೆಂಗ್ಯೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

ಒಟ್ಟಾರೆ ಡೆಂಗ್ಯೂ ಜಾಗೃತಿ ಕಾರ್ಯಕ್ರಮದಲ್ಲಿ ಏಕಕಾಲಕ್ಕೆ 1,748 ಸ್ಥಳಗಳಲ್ಲಿ ಅಂದಾಜು 2,97,500 ವಿದ್ಯಾರ್ಥಿಗಳು ಮತ್ತು 11,306 ಶಿಕ್ಷಕರು, ಸಿಬ್ಬಂದಿಗಳು ಭಾಗವಹಿಸಿ, ದಾಖಲೆ ನಿರೂಪಿಸಿದ್ದಾರೆ. ಇಷ್ಟೊಂದು ಪ್ರಮಾಣದ ವಿದ್ಯಾರ್ಥಿಗಳು ಮತ್ತು ಇತರರು ಡೆಂಗ್ಯೂ ಜಾಗೃತಿಯಲ್ಲಿ ನೇರವಾಗಿ ಭಾಗವಹಿಸಿದ್ದು, ಡೆಂಗ್ಯೂ ಮುಕ್ತ ಜಿಲ್ಲೆ ಮಾಡುವ ನಮ್ಮ ಸಂಕಲ್ಪಕ್ಕೆ ಬಲ ಬಂದಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದರು.

ಇಂದಿನ ಡೆಂಗ್ಯೂ ಕಾರ್ಯಕ್ರಮ ಯಶಸ್ವಿಯಾಗಿ ಸಂಘಟಿಸುವಲ್ಲಿ 1,011 ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆಯ 1,813 ಸಿಬ್ಬಂದಿಗಳು ಶ್ರಮಿಸಿದ್ದಾರೆ. ಎಲ್ಲರ ಸಹಕಾರ ಮತ್ತು ಸಾಂಘೀಕ ಪ್ರಯತ್ನದಿಂದ ಈ ಅಭಿಯಾನ ಯಶಸ್ವಿಯಾಗಿ ಜರುಗುತ್ತಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಸಂತಸ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಈಗಾಗಲೇ ಮನೆಮನೆ ಆರೋಗ್ಯ ಮತ್ತು ಲಾರ್ವಾ ಸಮೀಕ್ಷೆ ನಡೆದಿದ್ದು, ಅದನ್ನು ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು. ಡೆಂಗ್ಯೂ ಪ್ರಕರಣ ಹೆಚ್ಚು ಕಂಡು ಬರುವ ಗ್ರಾಮ ಅಥವಾ ನಗರಗಳಲ್ಲಿ ಪೀವರ್ ಕ್ಲಿನಿಕ್ ತೆರೆಯಲು ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ. ಅಗತ್ಯವೆನಿಸಿದಲ್ಲಿ ಡೆಂಗ್ಯೂ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಸುಮಾರು 20 ಹಾಸಿಗೆಗಳ ಪ್ರತ್ಯೇಕ ವಾರ್ಡ ಸಜ್ಜುಗೊಳಿಸಲಾಗಿದೆ. ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿ, ಚಿಕಿತ್ಸೆಗೆ ಸೌಲಭ್ಯಗಳನ್ನು ದಾಸ್ತಿಕರಿಸಲು ಆರೋಗ್ಯ ಇಲಾಖೆಗೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಶಿ ಪಾಟೀಲ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು.

ಧಾರವಾಡ ತಾಲೂಕು ವೈದ್ಯಾಧಿಕಾರಿ ಡಾ.ಕೆ.ಎನ್.ತನುಜಾ ಅವರು ಡೆಂಗ್ಯೂ ಹುಟ್ಟು, ಬೆಳವಣಿಗೆ, ನಿಯಂತ್ರಣ ಕುರಿತು ಪ್ರಾತ್ಯಕ್ಷಕೆ ಮೂಲಕ ವಿದ್ಯಾರ್ಥಿಗಳಿಗೆ ವಿವರಿಸಿದರು.

ಜಿಲ್ಲಾ ಆರ್.ಸಿ.ಎಚ್.ಓ ಅಧಿಕಾರಿ ಡಾ.ಸುಜಾತಾ ಹಸಮಿಮಠ ಅವರು ಕಾರ್ಯಕ್ರಮ ನಿರೂಪಿಸಿ, ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಡೆಂಗ್ಯೂ ಪ್ರತಿಜ್ಞಾ ವಿಧಿ ಭೋಧಿಸಿದರು.

ವೇದಿಕೆಯಲ್ಲಿ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಬಿ.ಎಸ್. ಮುಗನೂರಮಠ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ, ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಮಂಜುನಾಥ ಸೊಪ್ಪಿಮಠ, ಶಿಕ್ಷಣ ಇಲಾಖೆ ಡಿವೈಪಿಸಿ ಎಸ್.ಎಂ.ಹುಡೇದಮನಿ, ಧಾರವಾಡ ಶಹರ ಶಿಕ್ಷಣಾಧಿಕಾರಿ ಅಶೋಕ ಸಿಂದಗಿ, ಆದರ್ಶ ವಿದ್ಯಾಲಯದ ಪ್ರಾಂಶುಪಾಲ ಎಚ್.ಎಸ್.ಉಪ್ಪಾರ, ನಿವೇದಿತಾ ಶಾಲೆಯ ಪ್ರಾಂಶುಪಾಲ ಪಟ್ಟಣಕೊಡಿ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವನಿತಾ ವಿದ್ಯಾಲಯ, ಪಿಯು ಕಾಲೇಜು, ಸರಕಾರಿ ಮಾದರಿ ಶಾಲೆ, ನಿವೇದಿತಾ ಆದರ್ಶ ವಿದ್ಯಾಲಯ, ಶ್ರೇಯಾ ನರ್ಸಿಂಗ ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಸಿಡಿಸಿ ಸದಸ್ಯರು, ಸಾರ್ವಜನಿಕರು ಭಾಗವಹಿಸಿದ್ದರು.

*ಸ್ಕಿಟ್ ಮತ್ತು ಜಾಗೃತ ಹಾಡುಗಳ ಪ್ರದರ್ಶನ:* ಕಾರ್ಯಕ್ರಮದಲ್ಲಿ ಜನರಲ್ಲಿ ಡೆಂಗ್ಯೂ ಕುರಿತು ಅರಿವು ಮೂಡಿಸುವಲ್ಲಿ ಪರಿಣಾಮಕಾರಿ ಮಾಧ್ಯಮವಾದ ಕಿರುನಾಟಕ ಮತ್ತು ಜಾನಪದ ಹಾಡುಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

ಹುಬ್ಬಳ್ಳಿ ತಾಲೂಕಿನ ಕುರಡಿಕೇರಿ ಸರಕಾರಿ ಪ್ರಾಥಮಿಕ ಶಾಲೆ ಮಕ್ಕಳು ಡೆಂಗ್ಯೂ ತಡೆಗಟ್ಟುವ ಕುರಿತು ಮತ್ತು ಧಾರವಾಡ ಶ್ರೇಯಾ ನರ್ಸಿಂಗ್ ಕಾಲೇಜಿನ ಬಿಎಸ್.ಸಿ 3ನೇ ವರ್ಷದ ವಿದ್ಯಾರ್ಥಿಗಳು ವಿವಿಧ ರೀತಿಯ ಸೊಳ್ಳೆಗಳು, ಸಾಂಕ್ರಾಮಿಕ ರೋಗಗಳು, ಅವುಗಳಿಂದ ರಕ್ಷಣೆ ಕುರಿತು ಕಿರು ನಾಟಕ (ಸ್ಕಿಟ್) ಪ್ರದರ್ಶಿಸಿ, ಸಾರ್ವಜನಿಕರ ಗಮನ ಸೆಳೆದರು.

ಹರ್ಲಾಪುರದ ಸಿವೈಸಿಡಿ ಜನಪದ ಕಲಾ ತಂಡದ ಸದಸ್ಯರು ಡೆಂಗ್ಯೂ, ಚಿಕನ್ ಗುನ್ಯಾ, ಮಲೇರಿಯಾ ಕುರಿತು ಜಾನಪದ ಹಾಡುಗಳನ್ನು ಹಾಡಿ, ಜಾಗೃತಿ ಮೂಡಿಸಿದರು.

ಗಮನ ಸೆಳೆದ ಡೆಂಗ್ಯೂ ಮಾದರಿಗಳು: ಕಾರ್ಯಕ್ರಮಕ್ಕೆ ಆಗಮಿಸಿದ್ದ ವಿದ್ಯಾರ್ಥಿಗಳನ್ನು ಮತ್ತು ಸಾರ್ವಜನಿಕರನ್ನು ಆರೋಗ್ಯ ಇಲಾಖೆ ಹಾಗೂ ಸರಕಾರಿ ಶಾಲೆಗಳ ಮಕ್ಕಳು ರಚಿಸಿದ್ದ ಡೆಂಗ್ಯೂ ಸಾಂಕ್ರಾಮಿಕ ರೋಗಕ್ಕೆ ಕಾರಣವಾಗುವ ಈಡಿಸ್ ಇಜಿಪ್ಟೈ ಸೊಳ್ಳೆಯ ಜೀವನಚಕ್ರ ಬಿಂಬಿಸುವ ಮಾದರಿಗಳು ಆಕರ್ಷಿಸಿ, ಗಮನ ಸೆಳೆದವು. ಡೆಂಗ್ಯೂ ಜಾಗೃತಿಗಾಗಿ ಬ್ಯಾನರ್, ಕರಪತ್ರ, ಪೊಸ್ಟರ್‍ಗಳನ್ನು ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿ, ಹಂಚಲಾಯಿತು.

ಜಾಗೃತಿ ಜಾಥಾ:ಕಾರ್ಯಕ್ರಮ ಪೂರ್ವದಲ್ಲಿ ಮಾದರಮಡ್ಡಿ ಸರಕಾರಿ ಕನ್ನಡ ಮತ್ತು ಉರ್ದುಶಾಲೆಯ ಮಕ್ಕಳು ಹಾಗೂ ವನಿತಾ ಪ್ರೌಢಶಾಲೆ, ನಿವೇದಿತಾ ಆದರ್ಶ ವಿದ್ಯಾಲಯದ ವಿದ್ಯಾಥಿಗಳು ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ, ಡೆಂಗ್ಯೂ ಜಾಗೃತಿ ಬಿತ್ತಿ ಪತ್ರ ಪ್ರದರ್ಶನ, ಘೋಷಣೆಗಳ ಮೂಲಕ ಜಾಗೃತಿ ಮೂಡಿಸಿದರು.
ಜಾಥಾದಲ್ಲಿ ಡಿಎಚ್‍ಓ ಸೇರಿದಂತೆ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು, ಡಿಡಿಪಿಐ ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು ಭಾಗವಹಿಸಿದ್ದರು…

ವರದಿ. ಮಹಾಲಿಂಗ ಗಗ್ಗರಿ,ಬೆಳಗಾವಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend