ಬೀದಿ ನಾಯಿಗಳ ಸರ್ವೆ 15 ದಿನಗಳಲ್ಲಿ ಆರಂಭಿಸಿ: ಜಿಲ್ಲಾಧಿಕಾರಿ ದಿವ್ಯ ಪ್ರಭು…!!!

Listen to this article

ಬೀದಿ ನಾಯಿಗಳ ಸರ್ವೆ 15 ದಿನಗಳಲ್ಲಿ ಆರಂಭಿಸಿ: ಜಿಲ್ಲಾಧಿಕಾರಿ ದಿವ್ಯ ಪ್ರಭು
ವೈಜ್ಞಾನಿಕ ಪದ್ಧತಿ ಅನುಸರಿಸಿ, ನುರಿತ ಸಂಘ ಸಂಸ್ಥೆಗಳಿಂದ ಸರ್ವೆ ಹಾಗೂ ಸಂತಾನ ನಿಯಂತ್ರಣ ಕೈಗೊಳ್ಳಿ

ಧಾರವಾಡ : ಹುಬ್ಬಳ್ಳಿ – ಧಾರವಾಡ ಅವಳಿನಗರಗಳಲ್ಲಿ ಬೀದಿ ನಾಯಿಗಳ ಸಮೀಕ್ಷೆ ಕಾರ್ಯವನ್ನು 15 ದಿನದೊಳಗಾಗಿ ಆರಂಭಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳಾದ ದಿವ್ಯ ಪ್ರಭು ಅವರು ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಇಂದು ಜರುಗಿದ ಪ್ರಾಣಿ ಸಂತಾನ ನಿಯಂತ್ರಣ ಮೇಲ್ವಿಚಾರಣೆ ಮತ್ತು ಅನುಷ್ಠಾನ ಸಮಿತಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಸಮೀಕ್ಷೆಯು ಸರಕಾರೇತರ ಸಂಘ ಸಂಸ್ಥೆಗಳ ಮೂಲಕ ಅವೈಜ್ಞಾನಿಕವಾಗಿ ನಡೆಯುತ್ತಿದ್ದು, ಸಾರ್ವಜನಿಕರ ಹಾಗೂ ಪ್ರಾಣಿಗಳ ಸುರಕ್ಷತೆ ದೃಷ್ಟಿಯಿಂದ ಪ್ರಾಮಾಣಿತ ಕಾರ್ಯಾಚರಣೆ ವಿಧಾನ (ಸ್ಟಾಂಡರ್ಡ ಆಪರೇಟಿಂಗ್ ಪ್ರೋಸಿಜರ್) ಪ್ರಕಾರ ನುರಿತ ತಜ್ಞರಿಂದ ಸಮೀಕ್ಷೆ ಕೈಗೊಳ್ಳಬೇಕೆಂದು ಅವರು ಸೂಚಿಸಿದರು.

2018 ರ ಸಮೀಕ್ಷೆ ಪ್ರಕಾರ ಅವಳಿನಗರಗಳಲ್ಲಿ 26 ಸಾವಿರ ಹಾಗೂ ಜಿಲ್ಲೆಯಾದ್ಯಂತ 50 ಸಾವಿರ ಬೀದಿ ನಾಯಿಗಳು ಇರಬಹುದು ಎಂದು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು. ಪಾಲಿಕೆಯಿಂದ ನಾಯಿಗಳ ಸರ್ವೆ ಹಾಗೂ ಸಂತಾನ ಚಿಕಿತ್ಸೆಗೆ ಅಗತ್ಯ ವೈಜ್ಞಾನಿಕ ಪದ್ಧತಿಯ ವಿವರಗಳನ್ನು ಟೆಂಡರ್‍ನಲ್ಲಿ ನಮೂದಿಸತಕ್ಕದ್ದು. ಸೂಕ್ತ ಸಂಘ-ಸಂಸ್ಥೆಗಳ ಹಾಗೂ ತಜ್ಞರ ಜೊತೆ ಚರ್ಚಿಸಿ ಸೂಕ್ತ ನಿಗಾವಹಿಸಿ ಒಂದು ವರ್ಷದೊಳಗೆ ಸಮೀಕ್ಷೆಯನ್ನು ಪೂರ್ಣಗೊಳಿಸಬಹುದೆಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಇದೇ ರೀತಿಯಲ್ಲಿ ಜಿಲ್ಲೆಯ ನಗರ ಸಭೆ ಹಾಗೂ ಪಟ್ಟಣ ಪಂಚಾಯತಿಗಳಲ್ಲಿ ಹಾಗೂ ಗ್ರಾಮ ಪಂಚಾಯತಿಗಳಲ್ಲಿಯೂ ಸಹ ಅನುದಾನವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡು ಸಮೀಕ್ಷೆ ಹಾಗೂ ಸಂತಾನ ಚಿಕಿತ್ಸೆ ಕೈಗೊಳ್ಳುವಂತೆ ಅವರು ತಿಳಿಸಿದರು.
ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯು ಸೂಚಿಸಿದ ರೀತಿಯಲ್ಲಿ ನಾಯಿಗಳ ಗಣತಿಯನ್ನು ನಡೆಸತಕ್ಕದು. ಪ್ರಾಣಿ ಜನನ ನಿಯಂತ್ರಣ ಕಾರ್ಯಕ್ರಮವನ್ನು ಕಾರ್ಯಗತಗೊಳಿಸಲು ನಾಯಿಗಳ ಸಂಖ್ಯೆಗೆ ಅನುಗುಣವಾಗಿ ಅವಶ್ಯಕ ಮೂಲ ಸೌಕರ್ಯಗಳು ಇರುವುದನ್ನು ಖಚಿತಪಡಿಸಿಕೊಳ್ಳುವುದು. ಕನಿಷ್ಠ 70 ಪ್ರತಿಶತದಷ್ಟು ನಾಯಿಗಳ ಜನನ ನಿಯಂತ್ರಣವನ್ನು ಹಂತ ಹಂತವಾಗಿ ಕೈಗೊಳ್ಳತಕ್ಕದ್ದೆಂದರು.

ಬಿಡಾಡಿ ದನಗಳ ಬಗ್ಗೆ ಸಹ ಕ್ರಮವಹಿಸುವಂತೆ, ಬಿಡಾಡಿ ದನಗಳನ್ನು ಗೋಶಾಲೆಗೆ ಸೇರಿಸಿ ದಂಡ ವಿಧಿಸುವ ಕ್ರಮದ ಬಗ್ಗೆ ಮಾಲಿಕರಲ್ಲಿ ಅರಿವು ಮೂಡಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಅವಳಿನಗರಗಳಲ್ಲಿ ಈ ಬಗ್ಗೆ ಧ್ವನಿವರ್ಧಕಗಳ ಮೂಲಕ ವ್ಯಾಪಕ ಪ್ರಚಾರ ನೀಡುವಂತೆ ಸೂಚಿಸಿದರು.

ಧಾರವಾಡ ಜಿಲ್ಲೆಯಾದ್ಯಂತ ಸೆಪ್ಟೆಂಬರ್ 27, 2024 ರವರೆಗೆ ರೇಬಿಸ್ ನಿರ್ಮೂಲನಾ ದಿನಾಚರಣೆಯನ್ನು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಮ್ಮಿಕೊಂಡಿದ್ದು, ಉಚಿತವಾಗಿ ಸಾಕು ಹಾಗೂ ಬೀದಿ ನಾಯಿಗಳಿಗೆ ರೇಬಿಸ್ ಲಸಿಕೆ ಹಾಕಲಾಗುವುದು. ಜಿಲ್ಲೆಯ ಎಲ್ಲ ನಗರ, ಪಟ್ಟಣ, ಗ್ರಾಮ ಸ್ಥಳೀಯ ಸಂಸ್ಥೆಗಳು ಪಶುಪಾಲನಾ ಇಲಾಖೆಯ ಸಹಯೋಗದಲ್ಲಿ ಬೀದಿನಾಯಿಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿ ರೇಬಿಸ್ ರೋಗ ನಿರ್ಮೂಲನೆಗೆ ಸಾರ್ವಜನಿಕರು ಸಹಕರಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.

ಹುಬ್ಬಳ್ಳಿ-ಧಾರವಾಡ ಪಾಲಿಕೆಯು ಮುಖ್ಯ ಪಶುವೈದ್ಯಾಧಿಕಾರಿ ಡಾ. ಎ.ಜಿ.ಕುಲಕರ್ಣಿ ಮಾತನಾಡಿ, ಬೀದಿನಾಯಿಗಳ ಸಮೀಕ್ಷೆ ಹಾಗೂ ಸಂತಾನ ನಿಯಂತ್ರಣಕ್ಕೆ ಒಟ್ಟು 1.40 ಕೋಟಿ ರೂ ಟೆಂಡರ್ ಕರೆಯಲಾಗುತ್ತಿದ್ದು. ಪ್ರತಿ ನಾಯಿಯ ಶಸ್ತ್ರ ಚಿಕಿತ್ಸೆಗೆ 1650 ವೆಚ್ಚ ಸರ್ಕಾರೇತರ ಸಂಘ ಸಂಸ್ಥೆಗಳಿಗೆ ಭರಿಸಲಾಗುತ್ತಿದೆ. ಪಾಲಿಕೆ ವ್ಯಾಪ್ತಿಯಲ್ಲಿ 2024 ನೇ ಸಾಲಿನಲ್ಲಿ ಈವರೆಗೆ 2235 ಸಂತಾನಹರಣ ಚಿಕಿತ್ಸೆ ಕೈಗೊಳ್ಳಲಾಗಿದೆಯೆಂದು ಸಭೆಗೆ ತಿಳಿಸಿದರು.

ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕರಾದ ಡಾ. ರವಿ ಸಾಲಿಗೌಡರ ಅವರು ಮಾತನಾಡಿ ತಮ್ಮ ಪಾಲಿ ಕ್ಲಿನಿಕ್‍ನಲ್ಲಿ ಮೂರು ನುರಿತ ವೈದ್ಯರಿದ್ದು ಅವರಿಂದ ಸಂತಾನ ಚಿಕಿತ್ಸೆ ನಡೆಸಲಾಗುತ್ತಿದೆಯೆಂದರು. ಸೆಪ್ಟೆಂಬರ್ 28, 2024 ರಂದು ವಿಶ್ವ ರೇಬಿಸ್ ದಿನಾಚರಣೆ ಆಚರಿಸುತ್ತಿರುವದರಿಂದ ಇಲಾಖೆಯಿಂದ ಉಚಿತವಾಗಿ ರೇಬಿಸ್ ಲಸಿಕೆ ಹಾಕುತ್ತಿರುವುದರಿಂದ ಸಾರ್ವಜನಿಕರು ಕಡ್ಡಾಯವಾಗಿ ತಮ್ಮ-ಸಾಕು ನಾಯಿಗಳಿಗೆ ಲಸಿಕೆ ಹಾಕಿಸತಕ್ಕದ್ದು. ಲಸಿಕೆ ಹಾಕಿಸಿಕೊಳ್ಳಲು ಸಾರ್ವಜನಿಕರು ಹತ್ತಿರದ ಪಶುವೈದ್ಯಕೀಯ ಸಂಸ್ಥೆಯನ್ನು ಸಂಪರ್ಕಿಸುವಂತೆ ಅವರು ತಿಳಿಸಿದರು.

ಹುಮೇನ್ ಸೋಸೈಟಿ ಇಂಟರ್‍ನ್ಯಾಶನಲ್ ಇಂಡಿಯಾದ ಕರ್ನಾಟಕದ ಡಾ.ಮುಕೇಶ ಅವರು ದೇಶದಲ್ಲಿ ಹಲವಾರು ನಗರಗಳಲ್ಲಿ ತಾವು ಬೀದಿನಾಯಿಗಳ ಸಮೀಕ್ಷೆ ಹಾಗೂ ಸಂತಾನಹರಣ ಚಿಕಿತ್ಸೆ ವೈಜ್ಞಾನಿಕವಾಗಿ ಕೈಗೊಂಡ ಬಗ್ಗೆ ಸಭೆಗೆ ವಿವರಿಸಿದರು. ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯ ವಾರ್ಡನ್ ಡಾ. ಹೇಮಂತ್, ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಮೂಗನೂರಮಠ, ಎಸಿಎಫ್ ಪರಿಮಳಾ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend