ಅಂಕೋಲಾ ಹೆದ್ದಾರಿ ಕುಸಿತ ದುರಂತ; IRB ಅವೈಜ್ಞಾನಿಕ ಕಾಮಗಾರಿಗೆ ಸ್ಥಳೀಯರ ಆಕ್ರೋಶ…!!!

Listen to this article

ಅಂಕೋಲಾ ಹೆದ್ದಾರಿ ಕುಸಿತ ದುರಂತ; IRB ಅವೈಜ್ಞಾನಿಕ ಕಾಮಗಾರಿಗೆ ಸ್ಥಳೀಯರ ಆಕ್ರೋಶ
ಅಂಕೋಲಾ (ಉತ್ತರ ಕನ್ನಡ): ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿದು ದುರ್ಘಟನೆ ಸಂಭವಿಸಿದ ಬೆನ್ನಲ್ಲೇ ರಸ್ತೆ ಅಗಲೀಕರಣ ಕಾಮಗಾರಿ ನಡೆಸಿದ ಐಆರ್‌ಬಿ ರಸ್ತೆ ನಿರ್ಮಾಣ ಕಂಪನಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮಂಗಳೂರು- ಪಣಜಿ ರಾಷ್ಟ್ರೀಯ ಹೆದ್ದಾರಿ- 66 ಇದಾಗಿದ್ದು, ಇಲ್ಲಿ ಐಆರ್‌ಬಿ ಕಂಪೆನಿ ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಸಿತ್ತು. ರಸ್ತೆ ಅಗಲೀಕರಣಕ್ಕಾಗಿ ಪಕ್ಕದ ಗುಡ್ಡವನ್ನು ಅಗೆದು ಹಾಗೇ ಬಿಡಲಾಗಿತ್ತು. ದೊಡ್ಡ ಗುಡ್ಡ ಅಗೆದಿದ್ದರಿಂದ ಭಾರೀ ಮಳೆಯಿಂದ ಸಡಿಲಗೊಂಡು ಕುಸಿದಿದೆ. ಇದರಿಂದ ಕೆಳ ಭಾಗದಲ್ಲಿದ್ದ ಮನೆಯ ಮೇಲೆ ಭಾರೀ ಪ್ರಮಾಣದ ಮಣ್ಣು ಬಿದ್ದಿದ್ದು ಅಲ್ಲಿದ್ದ ಐವರು ಸಿಲುಕಿದ್ದರು ಎನ್ನಲಾಗಿದೆ. ಇದೇ ವೇಳೆ ಹೆದ್ದಾರಿ ಬದಿಯಲ್ಲಿದ್ದ ಕ್ಯಾಂಟೀನಲ್ಲಿ ಟ್ಯಾಂಕರ್ ನಿಲ್ಲಿಸಿ ಚಾಲಕ ಮತ್ತು ಕ್ಲೀನರ್ ಚಹಾ ಕುಡಿಯುತ್ತಿದ್ದರು.

ಗುಡ್ಡ ಕುಸಿತದಿಂದ ಕ್ಯಾಂಟೀನ್ ಸಮೇತ ಕುಸಿದು ಹೋಗಿದ್ದು ಅಲ್ಲಿದ್ದ ಇಬ್ಬರು ಟ್ಯಾಂಕರ್ ಸಿಬ್ಬಂದಿ ಮತ್ತು ಕ್ಯಾಂಟೀನಲ್ಲಿದ್ದ ಗಂಡ ಹೆಂಡತಿ ಮಣ್ಣಿನಡಿಗೆ ಸಿಲುಕಿದ್ದಾರೆ. ಮಣ್ಣಿನ ಕುಸಿತಕ್ಕೆ ಪಲ್ಟಿಯಾದ ಟ್ಯಾಂಕರ್ ಪಕ್ಕದಲ್ಲೇ ಹರಿಯುವ ಗಂಗಾವಳಿ ನದಿಯಲ್ಲಿ ಕೊಚ್ಚಿ ಹೋಗಿದೆ. ಟೀ ಸ್ಟಾಲ್ ನಡೆಸುತ್ತಿದ್ದ ವ್ಯಕ್ತಿ, ಆತನ ಪತ್ನಿ, ಮಗ ಸಾವನ್ನಪ್ಪಿದ್ದಾರೆ. ಜೊತೆಗೆ ಚಹಾ ಕುಡಿಯಲು ಬಂದಿದ್ದ ಚಾಲಕನೂ ಸಾವನ್ನಪ್ಪಿದ್ದಾನೆ. ಉಳಿದವರು ಎಷ್ಟು ಮಂದಿ ಇದ್ದಾರೆಂದು ಪತ್ತೆಯಾಗಿಲ್ಲ.

ಸ್ಥಳದಲ್ಲಿ ನೌಕಾಪಡೆ ಮತ್ತು ಇತರ ರಕ್ಷಣಾ ಪಡೆಗಳು ಕಾರ್ಯಾಚರಣೆಗೆ ಇಳಿದಿದ್ದು, ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ. ಈ ನಡುವೆ ಐಆರ್‌ಬಿ ರಸ್ತೆ ನಿರ್ಮಾಣ ಸಂಸ್ಥೆಯ ಅವೈಜ್ಞಾನಿಕ ಕಾಮಗಾರಿಯೇ ಅನಾಹುತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಒಂದು ಕಡೆ ನದಿಯಾದರೆ, ಮತ್ತೊಂದು ಕಡೆ ಗುಡ್ಡ ಇದೆ. ಗುಡ್ಡವನ್ನು ಅಗೆದು ಹೆದ್ದಾರಿ ಮಾಡಲಾಗಿದ್ದು, ಮಳೆಗೆ ಗುಡ್ಡ ಕುಸಿದು ಹೆದ್ದಾರಿ ಸಹಿತ ನದಿಯತ್ತ ಬಿದ್ದಿದೆ ಎಂದು ಹೇಳಿದ್ದಾರೆ.

ಈ ರಸ್ತೆಯ ಸಂಪೂರ್ಣ ವಿಸ್ತರಣೆಯು ಅವೈಜ್ಞಾನಿಕವಾಗಿದೆ. ಮುನ್ನೆಚ್ಚರಿಕೆ ವಹಿಸದೆ ರಸ್ತೆ ನಿರ್ಮಾಣಕ್ಕೆ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ 66 ರ ಉದ್ದಕ್ಕೂ ಇದೇ ಪರಿಸ್ಥಿತಿ ಇದೆ. ಈ ದುರಂತದಲ್ಲಿ ನನ್ನ ಸಂಬಂಧಿಕರೂ ಸಾವನ್ನಪ್ಪಿದ್ದಾರೆ. ಶವಗಳನ್ನು ಇಟ್ಟುಕೊಂಡು ಐಆರ್‌ಬಿ ವಿರುದ್ಧ ಪ್ರತಿಭಟಿಸುತ್ತೇವೆ ಎಂದು ಹೋಟೆಲ್ ಮಾಲೀಕ ಲಕ್ಷ್ಮಣ್ ಬೊಮ್ಮಯ್ಯ ನಾಯ್ಕ್ ಅವರ ಸಂಬಂಧಿ ಪುರುಷೋತ್ತಮ್ ನಾಯ್ಕ್ ಹೇಳಿದ್ದಾರೆ.

ಭೂಕುಸಿತದ ಬಗ್ಗೆ ಅಧ್ಯಯನ ನಡೆಸಿರುವ ಸ್ಥಳೀಯ ಪರಿಸರ ತಜ್ಞ ಹಾಗೂ ಸಮುದ್ರ ಜೀವಶಾಸ್ತ್ರಜ್ಞ ಪ್ರಕಾಶ್ ಮೇಸ್ತಾ ಮಾತನಾಡಿ, ಭೂಕುಸಿತಕ್ಕೆ ಐಆರ್‌ಬಿ ಕಾರಣ. ಒಂದೆಡೆ ನದಿ, ಮತ್ತೊಂದೆಡೆ ಜನವಸತಿ ಪ್ರದೇಶವಿದೆ. ದಕ್ಷಿಣ ಕನ್ನಡದಲ್ಲಿರುವಂತೆ ಕರಾವಳಿಯ ಬಯಲು ಪ್ರದೇಶ ಇಲ್ಲಿಲ್ಲ. ಐಆರ್’ಬಿ ಮಳೆಯನ್ನಷ್ಟೇ ಗಣನೆಗೆ ತೆಗೆದುಕೊಂಡು ರಸ್ತೆ ನಿರ್ಮಾಣ ಮಾಡಿದೆ. ಕಾಮಗಾರಿ ನಡೆಸುವುದಕ್ಕೂ ಮುನ್ನ 10 ವರ್ಷಗಳ ಸರಾಸರಿ ಗರಿಷ್ಠ ಮಳೆಯನ್ನು ಪರಿಗಣಿಸಬೇಕು. ಇದಲ್ಲದೆ, ನಮ್ಮ ಬೆಟ್ಟಗಳು ಜೇಡಿಮಣ್ಣಿನ ಲ್ಯಾಟರೈಟ್ ಬಂಡೆಗಳಿಂದ ರೂಪುಗೊಂಡಿವೆ. ಮಳೆ ಬಂದಾಗ, ಜೇಡಿಮಣ್ಣು ನೀರನ್ನು ಹೀರಿಕೊಳ್ಳುತ್ತದೆ ಮತ್ತು ಊದಿಕೊಳ್ಳುತ್ತದೆ, ಇದು ಭೂಕುಸಿತಕ್ಕೆ ಕಾರಣವಾಗುತ್ತದೆ. NH 66 ರ ಉದ್ದಕ್ಕೂ ಇದೇ ರೀತಿಯ ಘಟನೆ ಸಂಭವಿಸಿದೆ ಎಂದು ಹೇಳಿದ್ದಾರೆ.

ಈ ನಡುವೆ ಘಟನೆ ಬಳಿಕ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾಜಿ ಶಾಸಕಿ ರೂಪಾಲಿ ನಾಯ್ಕ್ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದು, ಮೃತದೇಹಗಳನ್ನು ಹೊರತೆಗೆಯಲು ಮತ್ತು ಎನ್‌ಎಚ್ 66 ತೆರವುಗೊಳಿಸಲು ಕಾರ್ಯಾಚರಣೆಯನ್ನು ತೀವ್ರಗೊಳಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದರು.

ಕಾರವಾರದಲ್ಲೂ ಭೂಕುಸಿತ

ಕಾರವಾರದ ಕಿನ್ನರ ಗ್ರಾಮದಲ್ಲಿ ಭಾರಿ ಭೂಕುಸಿತ ಸಂಭವಿಸಿದ್ದು, ಥೀಕರ್ಸ್ ಗುರವ್ (60) ಎಂಬುವವರು ಮೃತಪಟ್ಟಿದ್ದಾರೆ. ಭಾರೀ ಮಳೆಯಿಂದಾಗಿ ಮನೆಯ ಹಿಂದೆ ಗುಡ್ಡ ಕುಸಿದು ಬಿದಿದ್ದು, ಗುರವ್ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ…

ವರದಿ. ಮಹಾಲಿಂಗ ಗಗ್ಗರಿ. ಬೆಳಗಾವಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend